ADVERTISEMENT

ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!

ಪಿಟಿಐ
Published 16 ಏಪ್ರಿಲ್ 2024, 4:39 IST
Last Updated 16 ಏಪ್ರಿಲ್ 2024, 4:39 IST
   

ಜಮ್ಮು ಮತ್ತು ಕಾಶ್ಮೀರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಣದಲ್ಲಿ ಮಸೀದಿ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಡಳಿತ ಸಮಿತಿಯು ಹಮ್ಮಿಕೊಂಡಿದ್ದ ಹರಾಜಿನಲ್ಲಿ ಮೊಟ್ಟೆಯೊಂದು ₹2.26 ಲಕ್ಷ ಮೊತ್ತ ಸಂಗ್ರಹಿಸಿದೆ.

ಶ್ರೀನಗರದಿಂದ 55 ಕಿಲೋಮೀಟರ್ ದೂರದಲ್ಲಿರುವ ಸೋಪೋರ್‌ನ ಮಲ್ಪೋರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಸೀದಿ ನಿರ್ಮಾಣಕ್ಕೆ ಸಮಿತಿಯು ನಗದು ಮತ್ತು ವಸ್ತುವಿನ ರೂಪದಲ್ಲಿ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿತ್ತು. ಈ ವೇಳೆ ಮಹಿಳೆಯೊಬ್ಬರು ಕೋಳಿಮೊಟ್ಟೆಯನ್ನು ದೇಣಿಗೆಯಾಗಿ ಕೊಟ್ಟಿದ್ದರು. 

ADVERTISEMENT

ಈ ಮೊಟ್ಟೆ ಸೇರಿ ಸಂಗ್ರಹವಾದ ವಸ್ತುಗಳನ್ನು ಹರಾಜಿಗಿಡಲಾಗಿತ್ತು. ಮೊಟ್ಟೆಯನ್ನು ಮೂರು ದಿನಗಳವರೆಗೆ ಹರಾಜಿಗಿಡಲಾಗಿತ್ತು. ಪ್ರತಿ ಸುತ್ತಿನ ಹರಾಜಿನ ಬಳಿಕ ಮೊಟ್ಟೆಯನ್ನು ಗೆದ್ದವರು ಹಣ ಪಾವತಿಸಿ ಮತ್ತೆ ಹೆಚ್ಚಿನ ಹಣ ಸಂಗ್ರಹಿಸಲು ಮೊಟ್ಟೆಯನ್ನು ಸಮಿತಿಗೆ ದೇಣಿಗೆಯಾಗಿ ಹಿಂತಿರುಗಿಸಿದ್ದರು. ಹರಾಜಿನ ಕೊನೆಯ ದಿನ ಡ್ಯಾನಿಶ್ ಅಹಮದ್‌ ಎಂಬ ಯುವ ಉದ್ಯಮಿ ₹70,000ಕ್ಕೆ ಮೊಟ್ಟೆಯನ್ನು ಖರೀದಿಸಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

‘ನಾನೇನು ಶ್ರೀಮಂತನಲ್ಲ, ಆದರೆ ಪವಿತ್ರ ಮಸೀದಿಯ ಕಟ್ಟಡ ನಿರ್ಮಾಣ ಕಾರ್ಯ ಆದಷ್ಟು ಬೇಗ ಮುಗಿಯಲು ನನ್ನದೊಂದು ಸಹಾಯ’ ಎನ್ನುತ್ತಾರೆ ಅಹಮದ್‌. 

ಮೂರು ದಿನಗಳಲ್ಲಿ ಹಲವು ಸುತ್ತಿನ ಹರಾಜಿನಲ್ಲಿ ಮೊಟ್ಟೆಯಿಂದ ₹2,26,350 ಹಣ ಸಂಗ್ರಹವಾಗಿದೆ ಎಂದು ಅಹಮದ್‌ ತಿಳಿಸಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.