ADVERTISEMENT

Eid-ul-Azha: ದೇಶದಾದ್ಯಂತ ಸಂಭ್ರಮ, ಸಡಗರದಿಂದ ಬಕ್ರೀದ್ ಆಚರಣೆ; ಗಣ್ಯರ ಶುಭಾಶಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 6:50 IST
Last Updated 7 ಜೂನ್ 2025, 6:50 IST
<div class="paragraphs"><p>ಪ‍ಶ್ಚಿಮ ಬಂಗಾಳದ ಕೋಲ್ಕತ್ತದ ರೆಡ್‌ ರೋಡ್‌ ಬಳಿ ನಡೆದ ಸಾಮೂಹಿಕ ಪ್ರಾರ್ಥನೆ</p></div>

ಪ‍ಶ್ಚಿಮ ಬಂಗಾಳದ ಕೋಲ್ಕತ್ತದ ರೆಡ್‌ ರೋಡ್‌ ಬಳಿ ನಡೆದ ಸಾಮೂಹಿಕ ಪ್ರಾರ್ಥನೆ

   

ಪಿಟಿಐ ಚಿತ್ರ

ನವದೆಹಲಿ: ದೇಶದಾದ್ಯಂತ ಈದ್‌ ಉಲ್‌ ಅದಾವನ್ನು ಮುಸ್ಲಿಮರು ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಶನಿವಾರ ಆಚರಿಸಿದರು. ಬಕ್ರೀದ್ ಸಂದರ್ಭದಲ್ಲಿ ಗಣ್ಯರು ಶುಭಾಶಯ ಕೋರಿದ್ದಾರೆ.

ADVERTISEMENT

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಮೈದಾನಗಳತ್ತ ಬಂದ ಹಿರಿಯರು, ಕಿರಿಯರು, ಮಹಿಳೆಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಏಕತೆ ಮತ್ತು ಭಕ್ತಿಯ ಮನೋಭಾವ ಮೂಡಿಸುವ ಹಬ್ಬದ ಅರ್ಥವನ್ನು ಧರ್ಮಗುರು ಸಾರಿದರು.

ಸೂರ್ಯೋದಯಕ್ಕೂ ಪೂರ್ವದಲ್ಲೇ ಜಮಾ ಮಸೀದಿ, ಫತೇಪುರಿ ಮಸೀದಿ ಹಾಗೂ ಸೀಲಂಪುರ, ಓಖಲಾ ಮತ್ತು ನಿಜಾಮುದ್ದೀನ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. 

ಪಶ್ಚಿಮ ಬಂಗಾಳದ ಕೋಲ್ಕತ್ತ, ಮಧ್ಯಪ್ರದೇಶದ ಭೋಪಾಲ್, ಮಹಾರಾಷ್ಟ್ರದ ಮುಂಬೈ ಹಾಗೂ ನಾಗ್ಪುರ, ಚೆನ್ನೈ, ಕೇರಳದ ತಿರುವನಂತಪುರ, ಬೆಂಗಳೂರು ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಬಕ್ರೀದ್ ಆಚರಣೆ ಸಂಭ್ರಮ ಮತ್ತು ಶಾಂತಿಯುತವಾಗಿ ನೆರವೇರಿತು. 

ಭದ್ರತೆಗಾಗಿ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಕಾರ್ಯಪಡೆ, ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ಉಳಿದಂತೆ ಪೊಲೀಸರು ಬಂದೋಬಸ್ತ್ ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಗದ ಶಕ್ತಿ, ಉದಾರತೆಯ ಆಶೀರ್ವಾದ: ಉಪರಾಷ್ಟ್ರಪತಿ ಧನಕರ್

ಈದ್ ಉಲ್ ಅದಾ ಸಂದರ್ಭದಲ್ಲಿ ಶುಭಾಶಯ ಕೋರಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್‌, 'ತ್ಯಾಗದ ಶಕ್ತಿ, ಉದಾರತೆಯ ಆಶೀರ್ವಾದವನ್ನು ಈ ಹಬ್ಬ ನೆನಪಿಸುತ್ತದೆ’ ಎಂದು ಸಾಮಾಜಿಕ ಮಾದ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ.

‘ನಿಸ್ವಾರ್ಥ ಮತ್ತು ಸೇವಾ ಮನೋಭಾವವು ದೇಶದ ಪ್ರಜಾಪ್ರಭುತ್ವ ಮತ್ತು ವಿಭಿನ್ನತೆಯಲ್ಲಿ ಏಕತೆಯಲ್ಲಿ ವಿಶ್ವಾಸ ಹೊಂದಿರುವ ಭಾರತದ ಒಗ್ಗಟ್ಟನ್ನು ಇನ್ನಷ್ಟು ಭದ್ರಗೊಳಿಸುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.