ADVERTISEMENT

ಮಿಜೋರಾಂನ ಕಲ್ಲುಕ್ವಾರಿ ಅವಘಡ: 8 ಕಾರ್ಮಿಕರ ಮೃತದೇಹ ಹೊರಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2022, 3:13 IST
Last Updated 15 ನವೆಂಬರ್ 2022, 3:13 IST
   

ಐಜ್ವಾಲ್: ಮಿಜೋರಾಂನ ಕಲ್ಲುಕ್ವಾರಿ ಅವಘಡದಲ್ಲಿ ಮೃತಪಟ್ಟ ಬಿಹಾರದ 8 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸೋಮವಾರ ಸಂಜೆ ಕುಸಿದಿದ್ದ ಕಲ್ಲುಕ್ವಾರಿ ಅಡಿ 12 ಮಂದಿ ಸಿಲುಕಿದ್ದರು. ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ.

‘ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯಲಿದೆ. ಶೋಧ ಕಾರ್ಯಾಚರಣೆಯೂ ಮುಂದುವರಿದಿದ್ದು, ನಾಪತ್ತೆಯಾಗಿರುವ ಎಲ್ಲ ಕಾರ್ಮಿಕರು ಪತ್ತೆಯಾಗುವವರೆಗೂ ಕಾರ್ಯಾಚರಣೆ ನಡೆಯಲಿದೆ’ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಮೂಲಗಳ ಪ್ರಕಾರ, ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ಊಟದ ವಿರಾಮದ ಬಳಿಕ ಕೆಲಸದಲ್ಲಿ ತೊಡಗಿದ್ದಾಗ ಅವಘಡ ಸಂಭವಿಸಿದೆ. ಕಾರ್ಮಿಕರ ಜೊತೆಗೆ ಐದು ಹಿಟಾಚಿ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ.

ADVERTISEMENT

ಲೀಟೆ ಮತ್ತು ನಾತಿಯಾಲ್ ಗ್ರಾಮಗಳ ಜನರು ಸ್ವಯಂಪ್ರೇರಿತರಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ಪಡೆಯನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.

ಎರಡೂವರೆ ವರ್ಷಗಳಿಂದ ಈ ಕ್ವಾರಿ ಕಾರ್ಯಾಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.