ADVERTISEMENT

ಸೆ.17ರಂದು ನಮೀಬಿಯಾದಿಂದ ಭಾರತಕ್ಕೆ 17 ಚೀತಾಗಳ ಆಗಮನ

ಪಿಟಿಐ
Published 12 ಸೆಪ್ಟೆಂಬರ್ 2022, 13:30 IST
Last Updated 12 ಸೆಪ್ಟೆಂಬರ್ 2022, 13:30 IST
ನಮೀಬಿಯಾದಲ್ಲಿ ಭಾರತಕ್ಕೆ ತರಲಾಗುತ್ತಿರುವ ಚೀತಾಗಳ ಆರೋಗ್ಯ ತಪಾಸಣೆ: ಪಿಟಿಐ ಚಿತ್ರ
ನಮೀಬಿಯಾದಲ್ಲಿ ಭಾರತಕ್ಕೆ ತರಲಾಗುತ್ತಿರುವ ಚೀತಾಗಳ ಆರೋಗ್ಯ ತಪಾಸಣೆ: ಪಿಟಿಐ ಚಿತ್ರ   

ಭೋಪಾಲ್: ಮಧ್ಯಪ್ರದೇಶದ ಕುನೊ–ಪಾಲ್ಪುರ್ ರಾಷ್ಟ್ರೀಯ ಉದ್ಯಾನಕ್ಕೆ ಸೆಪ್ಟೆಂಬರ್ 17ರಂದು ಬೆಳಿಗ್ಗೆ 8 ಚೀತಾಗಳನ್ನು ತರಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಚೀತಾಗಳ ಮರುಪರಿಚಯ ಯೋಜನೆ’ಯಡಿ ತರಲಾಗುತ್ತಿರುವ ಪ್ರಾಣಿಗಳನ್ನು ಅದೇ ದಿನ ಪ್ರಧಾನಿ ನರೇಂದ್ರ ಮೋದಿ, ಕ್ವಾರಂಟೈನ್ ಸ್ಥಳಕ್ಕೆ ಬಿಡುಗಡೆ ಮಾಡಲಿದ್ದಾರೆ.

ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಚೀತಾಗಳನ್ನು ಕಾರ್ಗೊ ವಿಮಾನದಲ್ಲಿ ರಾಜಸ್ಥಾನದ ಜೈಪುರಕ್ಕೆ ತರಲಾಗುತ್ತದೆ. ಬಳಿಕ ಅಲ್ಲಿಂದ ಪ್ರಧಾನಿ ಕಾರ್ಯಕ್ರಮ ನಡೆಯಲಿರುವ ಕುನೊ–ಪಾಲ್ಪುರ್ ರಾಷ್ಟ್ರೀಯ ಉದ್ಯಾನಕ್ಕೆ ಹೆಲಿಕಾಪ್ಟರ್ ಮೂಲಕ ತರಲಾಗುವುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

‘ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಪ್ರಾಣಿಗಳನ್ನು ಸ್ಥಳಾಂತರಿಸುವಾಗ ಅಗತ್ಯವಿರುವ ಕಾನೂನು ಆದೇಶದ ಪ್ರಕಾರ, ನಾವು ಆರು ಸಣ್ಣ ಕ್ವಾರಂಟೈನ್ ಆವರಣಗಳನ್ನು ಸ್ಥಾಪಿಸಿದ್ದೇವೆ’ಎಂದು ಅಧಿಕಾರಿ ಹೇಳಿದರು.

ಪ್ರೋಟೋಕಾಲ್ ಪ್ರಕಾರ, ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಸ್ಥಳಾಂತರಗೊಳ್ಳುವ ಮೊದಲು ಮತ್ತು ನಂತರ ಪ್ರಾಣಿಗಳನ್ನು ತಲಾ ಒಂದು ತಿಂಗಳ ಕಾಲ ನಿರ್ಬಂಧಿಸಬೇಕು ಎಂದು ಅವರು ಹೇಳಿದರು.

ಚೀತಾಗಳ ವಯಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ಕೇಂದ್ರದ ಅಧಿಕಾರಿಗಳು ನಮೀಬಿಯಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದರಿಂದ ತಮ್ಮ ಬಳಿ ಮಾಹಿತಿ ಇಲ್ಲ ಎಂದು ಚೌಹಾಣ್ ಹೇಳಿದರು.

1947ರಲ್ಲಿ ಭಾರತದಲ್ಲಿ ಕೊನೆಯ ಚೀತಾ ಸಾವಿಗೀಡಾಗಿತ್ತು.ಹಿಂದಿನ ಮಧ್ಯಪ್ರದೇಶದ ಭಾಗವಾಗಿದ್ದ ಇಂದಿನ ಛತ್ತೀಸ್‌ಗಢ ರಾಜ್ಯದ ಕೊರಿಯಾ ಜಿಲ್ಲೆಯಲ್ಲಿ ಚೀತಾ ಮೃತಪಟ್ಟಿತ್ತು. 1952ರಲ್ಲಿ ಭಾರತದಲ್ಲಿ ಈ ಪ್ರಭೇದವು ಸಂ‍ಪೂರ್ಣ ನಾಶವಾಗಿದೆ ಎಂದು ಘೋಷಿಸಲಾಯಿತು.

ಭಾರತದಲ್ಲಿ ಆಫ್ರಿಕನ್ ಚೀತಾ ಪರಿಚಯ ಯೋಜನೆಯನ್ನು 2009ರಲ್ಲೇ ರೂಪಿಸಲಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲೇ ಚೀತಾಗಳನ್ನು ಪರಿಚಯಿಸಬೇಕಿತ್ತು. ಆದರೆ, ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಯೋಜನೆ ಹಿನ್ನಡೆ ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.