ಪ್ರಾತಿನಿಧಿಕ ಚಿತ್ರ
ಕಣ್ಣೂರು: ಎರಡು ದಶಕಗಳ ಹಿಂದೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಸಿಪಿಐ (ಎಂ) ಕಾರ್ಯಕರ್ತರಿಗೆ ಕೇರಳ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.
ಬಿಜೆಪಿ ಕಾರ್ಯಕರ್ತ ಸೂರಜ್ ಎನ್ನುವಾತನ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ತಲಶ್ಶೇರಿ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಧೀಶರಾದ ಕೆ.ಟಿ ನಿಸಾರ್ ಅಹಮದ್ ಅವರು ಶುಕ್ರವಾರ, 9 ಮಂದಿ ಸಿಪಿಐ (ಎಂ) ಕಾರ್ಯಕರ್ತರನ್ನು ಅಪರಾಧಿ ಎಂದು ತೀರ್ಪು ನೀಡಿದ್ದರು.
8 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹50ಸಾವಿರ ದಂಡ ಹಾಗೂ ಇನ್ನೊಬ್ಬನಿಗೆ ₹25 ಸಾವಿರ ದಂಡ ಮತ್ತು ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇವರಲ್ಲಿ ಟಿ.ಕೆ ರಾಜೇಶ್ ಮತ್ತು ಪಿ.ಎಂ ಮನೋರಾಜ್ ಎನ್ನುವವರು ಈಗಾಗಲೇ 2012ರಲ್ಲಿ ನಡೆದಿದ್ದ ಟಿ.ಪಿ ಚಂದ್ರಶೇಖರನ್ ಅವರ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ 2005ರ ಆಗಸ್ಟ್7 ರಂದು ಬೆಳಿಗ್ಗೆ 8.40ಕ್ಕೆ ಆಟೋರಿಕ್ಷಾದಲ್ಲಿ ಬಂದ ದುಷ್ಕರ್ಮಿಗಳು ಬಿಜೆಪಿ ಕಾರ್ಯಕರ್ತ ಸೂರಜ್ ಅವರ ಹತ್ಯೆ ಮಾಡಿದ್ದರು. ಘಟನೆ ನಡೆಯುವ ಆರು ತಿಂಗಳ ಮೊದಲು, ಸೂರಜ್ ಮೇಲೆ ಹತ್ಯೆಗೆ ಪ್ರಯತ್ನ ನಡೆದಿತ್ತು. ಆಗ ಕಾಲುಗಳಿಗೆ ತೀವ್ರವಾಗಿ ಗಾಯಗಳಾಗಿ ಸೂರಜ್ ಆರು ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು. ಮೊದಲು ಸಿಪಿಐ (ಎಂ) ಪಕ್ಷದಲ್ಲೇ ಇದ್ದ ಸೂರಜ್ ಬಳಿಕ ಬಿಜೆಪಿಗೆ ಸೇರಿದ್ದರು. ಪಕ್ಷ ತೊರೆದ ಸಿಟ್ಟಿಗೆ ಆತನನ್ನು ಕೊಲೆ ಮಾಡಲಾಗಿತ್ತು ಎಂದು ಒಟ್ಟು 28 ಮಂದಿ ಸಾಕ್ಷಿದಾರರ ಹೇಳಿಕೆ ಮತ್ತು 51 ದಾಖಲೆಗಳನ್ನು ಸಾಕ್ಷಿಯನ್ನಾಗಿ ಕೋರ್ಟ್‌ಗೆ ಅಧಿಕಾರಿಗಳು ಸಲ್ಲಿಸಿದ್ದರು.
ಸೂರಜ್ ಕೊಲೆ ಪ್ರಕರಣದಲ್ಲಿ ಒಟ್ಟು 12 ಸಿಪಿಐ (ಎಂ) ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಘಟನೆ ಬಳಿಕ ಇಬ್ಬರು ಆರೋಪಿಗಳು ವಿಚಾರಣೆ ವೇಳೆ ಮೃತಪಟ್ಟಿದ್ದರು. 10ನೇ ಆರೋಪಿಯನ್ನು ಕೋರ್ಟ್ ಖುಲಾಸೆಗೊಳಿಸಿದೆ. ಈಗ ಒಬ್ಬ ಅಪರಾಧಿಗೆ ಮೂರು ವರ್ಷ ಹಾಗೂ ಇನ್ನುಳಿದ 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.