ADVERTISEMENT

ಗುಡಿಸಲಿನ ಮೇಲೆ ಹರಿದ ಕ್ರೇನ್‌; 8 ಸಾವು, ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 6:09 IST
Last Updated 9 ಆಗಸ್ಟ್ 2021, 6:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಬರ್ಡಾ ಗ್ರಾಮದಲ್ಲಿ ಸೋಮವಾರ ಮುಂಜಾನೆ ಕ್ರೇನ್ ರೀತಿಯ ಲಾರಿಯೊಂದು ರಸ್ತೆ ಬದಿಯಲ್ಲಿದ್ದ ಗುಡಿಸಲಿನ ಮೇಲೆ ಹರಿದ ಪರಿಣಾಮ, ಎಂಟು ಮಂದಿ ಮೃತಪಟ್ಟು ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಕುಂಡ್ಲಾ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾನೆ 2.30ರ ಸುಮಾರಿಗೆ ಈ ಅವಘಡ ನಡೆದಿದೆ. ಅಪಘಾತ ಸಂಭವಿಸಿದಾಗ ಗುಡಿಸಲಿನಲ್ಲಿ 10 ಮಂದಿ ನಿದ್ರಿಸುತ್ತಿದ್ದರು.

ಈ ಲಾರಿ, ರಾಜ್‌ಕೋಟ್‌ನಿಂದ ಅಮ್ರೇಲಿ ಜಿಲ್ಲೆಯ ಜಫ್ರಾಬಾದ್‌ನತ್ತ ಹೋಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಬರ್ಡಾ ಗ್ರಾಮದ ರೈಲ್ವೆ ಲೆವೆಲ್‌ ಕ್ರಾಸ್‌ಗಿಂತ ಮುನ್ನ ರಸ್ತೆ ಪಕ್ಕದ್ದಲ್ಲಿದ್ದ ಗುಡಿಸಿಲಿಗೆ ಗುದ್ದಿತು. ಚಾಲಕ ನಿದ್ದೆ ಮಾಡುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೃತರಲ್ಲಿ ಎಂಟು ವರ್ಷದ ಪೂಜಾ ಸಖಲಾ, ಆಕೆಯ 13 ವರ್ಷದ ಸಹೋದರಿ ಸುಕನ್, ತಂದೆ ಹೇಮರಾಜ್ ಮತ್ತು 37, ತಾಯಿ ಲಕ್ಷ್ಮಿ, 30 ಸೇರಿದ್ದಾರೆ. ಮೂರು ಮತ್ತು ಏಳು ವರ್ಷದ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಅಮ್ರೇಲಿ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಅಪಘಾತದ ಕುರಿತು ಶೀಘ್ರವೇ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಪರವಾಗಿ ಕುಟುಂಬಗಳಿಗೆ ₹ 4 ಲಕ್ಷ ಪರಿಹಾರ ಘೋಷಿಸಿದರು. ಮೃತಪಟ್ಟ ಸಂತ್ರಸ್ತರು ದಿನಗೂಲಿ ಕಾರ್ಮಿಕರು ಮತ್ತು ಸಂಬಂಧಿಕರು ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.