ADVERTISEMENT

ಅಂಪನ್: 8 ಗಂಟೆಗಳ ಕಾಲ ಮರವೇರಿ ಕುಳಿತು ಜೀವ ರಕ್ಷಿಸಿಕೊಂಡ ಮಹಿಳೆ

ಸೌಮ್ಯ ದಾಸ್
Published 25 ಮೇ 2020, 10:15 IST
Last Updated 25 ಮೇ 2020, 10:15 IST
ಬುರಿಗೋಲಿನಿ ಅಣೆಕಟ್ಟಿಗೆ ಹಾನಿಯುಂಟಾಗಿದ್ದು, ದುರಸ್ತಿ ಮಾಡುತ್ತಿರುವ ದೃಶ್ಯ ( ಕೃಪೆ: ಎಎಫ್‌ಪಿ)
ಬುರಿಗೋಲಿನಿ ಅಣೆಕಟ್ಟಿಗೆ ಹಾನಿಯುಂಟಾಗಿದ್ದು, ದುರಸ್ತಿ ಮಾಡುತ್ತಿರುವ ದೃಶ್ಯ ( ಕೃಪೆ: ಎಎಫ್‌ಪಿ)   

ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಅಂಪನ್ ಚಂಡಮಾರುತ ಅಬ್ಬರಿಸಿತ್ತು.ಇಲ್ಲಿನ ಬೈನಾರ ಗ್ರಾಮದಲ್ಲಿ ಗುಡಿಸಲೊಂದರಲ್ಲಿ ವಾಸವಾಗಿದ್ದ ಹಿರಿಯ ನಾಗರಿಕರಾದಅಂಜಲಿ ಬೈದ್ಯ ಮತ್ತು ನಿರಂಜನ್ ಬೈದ್ಯ ಅಪಾಯ ಅರಿತು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ನಿರ್ಧರಿಸಿದರು. ಗುಡಿಸಲ ಪಕ್ಕದಲ್ಲಿ ದಸ ನದಿ ಉಕ್ಕಿ ಹರಿಯುತ್ತಿತ್ತು. ಕ್ಷಣ ಕ್ಷಣಕ್ಕೂ ಚಂಡಮಾರುತದ ವೇಗ ಬದಲಾಗುತ್ತಲೇ ಇತ್ತು.

ಸುರಕ್ಷಿತ ಸ್ಥಳಕ್ಕೆ ಹೋಗುವ ಮುನ್ನ ಅವರು ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಬಿಚ್ಟಿ ಬಿಟ್ಟಿದ್ದರು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ನದಿ ನೀರು ಗುಡಿಸಲನ್ನೇ ಕೊಚ್ಚಿಕೊಂಡು ಹೋಯಿತು. ಅದೃಷ್ಟವಶಾತ್ ಅಂಜಲಿಯವರ ಬಟ್ಟೆ ಪೇರಳೆ ಮರದ ರೆಂಬೆಯೊಂದಕ್ಕೆ ಸಿಕ್ಕಿ ಹಾಕಿಕೊಂಡಿತು. ತನ್ನ ಎಲ್ಲ ಧೈರ್ಯವನ್ನು ಒಗ್ಗೂಡಿಸಿ ಅಂಜಲಿ ಆ ಮರ ಹತ್ತಿ ಬಿಟ್ಟರು. ನೀರಿನ ಅಲೆಗಳು ಬಡಿಯುತ್ತಿದ್ದರೂ ಮರವೇ ಸುರಕ್ಷಿತ ಎಂದರಿತು ಅಂಜಲಿ ಅಲ್ಲಿಂದ ಅಲುಗಾಡಲಿಲ್ಲ. ತನ್ನ ಪತಿ ಬದುಕಿದ್ದಾರಾ? ಇಲ್ಲವೋ ಎಂಬುದರ ಬಗ್ಗೆಯೂ ಆಕೆಗೆ ಗೊತ್ತಿರಲಿಲ್ಲ.

ಆಕೆಯ ಕೈಯಲ್ಲಿ ಪುಟ್ಟ ಟಾರ್ಚ್ ಇತ್ತು. ತನ್ನನ್ನು ಕಾಪಾಡಿ ಎಂದು ಸಿಗ್ನಲ್ ಕೊಡುವುದಕ್ಕಾಗಿ ಆಕೆ ಆ ಟಾರ್ಚ್ ಬೆಳಗುತ್ತಲೇ ಇದ್ದರು. ಸ್ಥಳೀಯರ ಪ್ರಕಾರ ರಾತ್ರಿ ಬುಧವಾರ ರಾತ್ರಿ 9.30ರಿಂದ ಗುರುವಾರ ಬೆಳಗ್ಗೆ 4ಗಂಟೆವರೆಗೆ ಆಕೆ ಮರದಲ್ಲೇ ಇದ್ದರು. ಗುರುವಾರ ಮುಂಜಾನೆ ನೀರಿನ ಅಬ್ಬರ ಕಡಿಮೆಯಾದಾಗ ಆಕೆಯನ್ನು ಕಂಡ ಸ್ಥಳೀಯರು ರಕ್ಷಿಸಿದ್ದಾರೆ.ಅದೃಷ್ಟವಶಾತ್ ನನ್ನ ಪತಿ ಬದುಕಿ ಉಳಿದಿದ್ದಾರೆ. ನದಿ ನೀರು ಕೊಚ್ಚಿಕೊಂಡು ಹೋದಾಗ ಅವರು ಬಿದಿರು ಹಿಡಿದು ಅವರು ಬದುಕುಳಿದಿದ್ದರು ಎಂದು ಅಂಜಲಿ ಹೇಳಿದ್ದಾರೆ.
ಆದರೆ ಮನೆ ಮತ್ತು ಎಲ್ಲ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಆ ನದಿ ನಮ್ಮನ್ನು ಭಿಕ್ಷುಕರನ್ನಾಗಿ ಮಾಡಿತು. ಇನ್ನು ಮುಂದಿನ ಜೀವನ ಹೇಗೆ ಎಂಬುದು ಗೊತ್ತಿಲ್ಲ ಅಂತಾರೆ ಅವರು. ಅದೇ ವೇಳೆ ಅಂಪನ್ ಚಂಡಮಾರುತದಿಂದ ರಕ್ಷಣೆ ಪಡೆಯಲುಸುಮಾರು 100ರಷ್ಟು ಜನರು ಪ್ಲಾಸ್ಟಿಕ್ ಶೀಟ್‌ಗಳಿಂದ ಮಾಡಿದ ಟೆಂಟ್‌ಗಳಲ್ಲಿ ವಾಸವಾಗಿದ್ದಾರೆ ಎಂದು ಅಂಜಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.