ಪನ್ನಾ: ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಪಿಟಿಆರ್) ಹುಲಿ ದಾಳಿಯಿಂದ 65 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
ಸೋಮವಾರ ನಾಲ್ವರು ಮಹಿಳೆಯರು ಮೇವು ತರಲು ಹುಲಿ ಸಂರಕ್ಷಿತ ಪ್ರದೇಶದ ಒಳಗೆ ಹೋಗಿದ್ದ ಸಂದರ್ಭದಲ್ಲಿ ದುರಂತ ನಡೆದಿದೆ. ಫುಲಿಯಾ ಬಾಯಿ ಅವರ ಮೇಲೆ ಹುಲಿ ದಾಳಿ ನಡೆಸಿ ಕಾಡಿನ ಮಧ್ಯಕ್ಕೆ ಎಳೆದು ತಂದುಹಾಕಿತ್ತು. ಮತ್ತೊಬ್ಬ ಮಹಿಳೆ ಓಡಿ ಹೋಗಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಹೇಳಿದರು.
ಆನೆಗಳನ್ನು ಬಳಸಿ ಸಂತ್ರಸ್ತೆಗಾಗಿ ಹುಡುಕಾಟ ನಡೆಸಲಾಗಿತ್ತು. ಬಳಿಕ ಅವರ ಮೃತದೇಹವು ಪೊದೆಯೊಳಗೆ ಪತ್ತೆಯಾಗಿದೆ ಎಂದರು.
ದಾಳಿ ನಡೆಸಿದ ಹುಲಿಯನ್ನು ಗುರುತಿಸಿ ಅದರ ಚಲನವಲನಗಳ ಮೇಲೆ ಗಮನ ಇಡಲಾಗಿದೆ. ಅರಣ್ಯ ಪ್ರದೇಶದ ಒಳಗೆ ಪ್ರವೇಶಿಸದಂತೆ ಸ್ಥಳೀಯರಿಗೆ ಸೂಚಿಸಲಾಗಿದೆ ಎಂದು ಪಿಟಿಆರ್‌ನ ಉಪ ನಿರ್ದೇಶಕ ಮೋಹಿತ್ ಸೂದ್ ತಿಳಿಸಿದರು.
ನಿಯಮಗಳ ಪ್ರಕಾರ, ಮೃತರ ಕುಟುಂಬಸ್ಥರಿಗೆ ₹8 ಲಕ್ಷ ಪರಿಹಾರ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.