ADVERTISEMENT

ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗುತ್ತಿದೆ: ಸಂಜಯ್ ಸಿಂಗ್‌ ಆರೋಪ

ಪಿಟಿಐ
Published 10 ಡಿಸೆಂಬರ್ 2024, 9:32 IST
Last Updated 10 ಡಿಸೆಂಬರ್ 2024, 9:32 IST
ಸಂಜಯ್‌ ಸಿಂಗ್‌
ಸಂಜಯ್‌ ಸಿಂಗ್‌   

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಿಂದ ಅಪಾರ ಸಂಖ್ಯೆಯಲ್ಲಿ ಮತದಾರರ ಹೆಸರನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವ ಕುರಿತು ವಾಗ್ದಾಳಿ ನಡೆಸಿರುವ ಎಎಪಿ ನಾಯಕ ಸಂಜಯ್‌ ಸಿಂಗ್‌, ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಸೇರಿ ಒಳಸಂಚು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌.ಕೆ ಪುರಂ ಕ್ಷೇತ್ರದಲ್ಲಿ 3,800 ಮತದಾರರ ಹೆಸರು ಅಳಿಸಲು ಅರ್ಜಿ ಸಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿತ್ತು. ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಶಾಸಕರು ಈ ಮತದಾರರ ಹೆಸರನ್ನು ಪರಿಶೀಲಿಸಿದಾಗ ಅವರಲ್ಲಿ 1,800 ಜನರು ಅರ್ಹ ಮತದಾರರಾಗಿದ್ದು, ಇನ್ನೂ ಒಂದೇ ಸ್ಥಳದಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಅರ್ಜಿಯಲ್ಲಿ ಹೆಸರಿಸಲಾದ ಮತದಾರರು ಈ ಹಿಂದೆ ಚುನಾವಣೆಯಲ್ಲಿ ಎಎಪಿ ಗೆದ್ದಿರುವ ಬೂತ್‌ಗಳಿಗೆ ಸೇರಿದವರು’ ಎಂದು ಸಿಂಗ್‌ ಹೇಳಿದ್ದಾರೆ.

ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಸೇರಿ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದ ಸಿಂಗ್‌, ಅರ್ಜಿಯಲ್ಲಿ ಹೆಸರಿರುವ ಮತದಾರರನ್ನು ಭೇಟಿಯಾಗಿ ಅವರು ಅರ್ಹ ಮತದಾರರೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಮುಖ್ಯ ಚುನಾವಣಾ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ADVERTISEMENT

ಮುಂದಿನ ವರ್ಷ ನಡೆಯಲಿರುವ ದೆಹಲಿ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯಿಂದ ಅನೇಕ ಮತದಾರರ ಹೆಸರನ್ನು ಅಳಿಸಲಾಗಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಮತ್ತು ಪಕ್ಷದ ಇತರ ನಾಯಕರು ಆರೋಪಿಸಿದ್ದರು.

ಕಳೆದ ವಾರ, ಬಿಜೆಪಿ ನಾಯಕರೊಬ್ಬರು ಶಾಹದಾರ ಕ್ಷೇತ್ರದಲ್ಲಿ 11,000ಕ್ಕೂ ಹೆಚ್ಚು ಮತದಾರರ ಹೆಸರನ್ನು ಅಳಿಸಲು ದೆಹಲಿಯ ಚುನಾವಣಾ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದರು.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.