ಚುನಾವಣಾ ಆಯೋಗ
ನವದೆಹಲಿ: ಕರ್ನಾಟಕದ 12 ಪಕ್ಷಗಳು ಸೇರಿದಂತೆ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಆಯೋಗವು ಶನಿವಾರ ತನ್ನ ಪಟ್ಟಿಯಿಂದ ಕೈಬಿಟ್ಟಿದೆ.
ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಷರತ್ತನ್ನು ಈ ಪಕ್ಷಗಳು ಪಾಲಿಸಿಲ್ಲ. 2019ರಿಂದ ಇದುವರೆಗಿನ ಆರು ವರ್ಷಗಳ ಅವಧಿಯಲ್ಲಿ ಈ ಪಕ್ಷಗಳು ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಮತ್ತು ನೋಂದಾಯಿಸಿಕೊಂಡಿರುವ ವಿಳಾಸದಲ್ಲಿಯೂ ಈ ಪಕ್ಷಗಳ ಕಚೇರಿಯೂ ಪತ್ತೆಯಾಗಿಲ್ಲ ಎಂದು ಆಯೋಗ ತಿಳಿಸಿದೆ.
ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲೂ ಭಾರತೀಯ ಹಿಂದುಳಿದ ಪಕ್ಷ, ಬಿಹಾರ ಜನತಾ ಪಕ್ಷ ಮತ್ತು ಗಾಂಧಿ ಪ್ರಕಾಶ್ ಪಕ್ಷ ಸೇರಿದಂತೆ 17 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಉತ್ತರ ಪ್ರದೇಶದಲ್ಲಿನ 115 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದೆಹಲಿ 27, ತಮಿಳುನಾಡು 22, ಹರಿಯಾಣ 21, ಮಧ್ಯಪ್ರದೇಶ 15, ತೆಲಂಗಾಣ 13 ಹಾಗೂ ಗುಜರಾತ್‌ನ 11 ಪಕ್ಷಗಳನ್ನು ಆಯೋಗವು ಪಟ್ಟಿಯಿಂದ ಕೈಬಿಟ್ಟಿದೆ.
ಅಸ್ತಿತ್ವದಲ್ಲಿದ್ದ 2,854 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ (ಆರ್‌ಯುಪಿಪಿ) ಪೈಕಿ, ಪರಿಷ್ಕರಣೆಯ ಬಳಿಕ 2,520 ಪಕ್ಷಗಳು ಪಟ್ಟಿಯಲ್ಲಿ ಉಳಿದಿವೆ. ಪ್ರಸ್ತುತ ಆರು ರಾಷ್ಟ್ರೀಯ ಪಕ್ಷಗಳು ಹಾಗೂ 67 ರಾಜ್ಯ ಪಕ್ಷಗಳಿವೆ.
ಕಳೆದ ಜೂನ್ ತಿಂಗಳಲ್ಲಿ 345 ರಾಜಕೀಯ ಪಕ್ಷಗಳ ವಿಚಾರಣೆ ನಡೆಸಿದ ಆಯೋಗವು ನಿಯಮಗಳನ್ನು ಪಾಲಿಸದ 334 ಪಕ್ಷಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಈ ಪಕ್ಷಗಳು ದೇಣಿಗೆ ಪಡೆಯುವುದು ಹಾಗೂ ಆದಾಯ ತೆರಿಗೆಯ ವಿನಾಯಿತಿ ಪಡೆಯುವುದನ್ನು ನಿರ್ಬಂಧಿಸಿದೆ. 11 ಪಕ್ಷಗಳ ಕಾರ್ಯವೈಖರಿಯನ್ನು ಮರುಪರಿಶೀಲಿಸುವಂತೆ ಆಯಾ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.
2022ರಲ್ಲಿ ನಡೆದ ಪರಿಷ್ಕರಣೆಯಲ್ಲಿ 537 ಪಕ್ಷಗಳ ಪೈಕಿ 284 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದು ನಿರಂತರ ಪ್ರಕ್ರಿಯೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ಆಯೋಗವು ನಿಷ್ಕ್ರಿಯ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪಟ್ಟಿಯನ್ನು 2001ರಿಂದ ಇಲ್ಲಿಯವರೆಗೆ ಮೂರರಿಂದ ನಾಲ್ಕು ಬಾರಿ ಪರಿಷ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆ ಹಾಗೂ ಆದಾಯ ತೆರಿಗೆಯ ಕಾನೂನುಗಳನ್ನು ಪಟ್ಟಿಯಿಂದ ಕೈಬಿಡಲಾದ ಬಹುತೇಕ ಪಕ್ಷಗಳು ಉಲ್ಲಂಘಿಸಿವೆ. ಆಕ್ಷೇಪಣೆ ಸಲ್ಲಿಸಲು 30 ದಿನ ಕಾಲಾವಕಾಶ ನೀಡಿದ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
ಕರ್ನಾಟಕದ ಕೈಬಿಟ್ಟ ಪಕ್ಷಗಳು...
* ಅಂಬೇಡ್ಕರ್ ಜನತಾ ಪಕ್ಷ
*ಭಾರತೀಯ ಪ್ರಜಾ ಪಕ್ಷ
* ಜನ ಸ್ವರಾಜ್ಯ ಪಕ್ಷ
* ಕಲ್ಯಾಣ ಕ್ರಾಂತಿ ಪಕ್ಷ
* ಕರ್ನಾಟಕ ಪ್ರಜಾ ವಿಕಾಸ್ ಪಕ್ಷ
* ಕರ್ನಾಟಕ ಸ್ವರಾಜ್ಯ ಪಕ್ಷ
*ಮಹಿಳಾ ಪ್ರಧಾನ ಪಕ್ಷ
* ನಮ್ಮ ಕಾಂಗ್ರೆಸ್
* ಪ್ರಜಾ ರೈತ ರಾಜ್ಯ ಪಕ್ಷ
* ರಕ್ಷಕ ಸೇನಾ
* ಸಮನ್ಯಾ ಜನತಾ ಪಕ್ಷ (ಲೋಕ ತಾಂತ್ರಿಕ್)
* ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.