ನವದೆಹಲಿ: ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಶೀಲನೆಗೆ (ಎಸ್‌ಐಆರ್) ನಿರ್ದೇಶನ ನೀಡಿರುವುದನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಅನರ್ಹ ಮತದಾರರ ಹೆಸರುಗಳನ್ನು ಕೈಬಿಡಲು ಮತ್ತು ಅರ್ಹರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಶೀಲನೆಗೆ ಚುನಾವಣಾ ಆಯೋಗವು ಜೂನ್ 24ರಂದು ಸೂಚನೆ ನೀಡಿತ್ತು. ಬಿಹಾರ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗದ ಆದೇಶವು ಸಂವಿಧಾನದ 14, 19, 21, 325 ಮತ್ತು 326ನೇ ವಿಧಿಗಳು ಹಾಗೂ 1950ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಮತ್ತು 1960ರ ಮತದಾರರ ನೋಂದಣಿ ನಿಯಮಗಳ ನಿಯಮ 21ಎ ನಿಬಂಧನೆಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ವಾದಿಸಿದೆ.
ಎಡಿಆರ್ ಪರ ಅರ್ಜಿ ಸಲ್ಲಿಸಿರುವ ವಕೀಲ ಪ್ರಶಾಂತ್ ಭೂಷಣ್, ‘ಚುನಾವಣಾ ಆಯೋಗದ ಆದೇಶವು ಲಕ್ಷಾಂತರ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಬಹುದು ಮತ್ತು ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ಅಡ್ಡಿಯಾಗಿ ಪರಿಣಮಿಸಬಹುದು’ ಎಂದು ಹೇಳಿದ್ದಾರೆ.
ನಗರಗಳು ತ್ವರಿತವಾಗಿ ಬೆಳವಣಿಗೆ ಆಗಿರುವುದು, ವಲಸೆ ಹೆಚ್ಚಿರುವುದು, ಯುವ ಜನರು ಮತದಾನಕ್ಕೆ ಅರ್ಹರಾಗಿರುವುದು ಮತ್ತು ವಿದೇಶಿ ಅಕ್ರಮ ವಲಸಿಗರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದರಿಂದ ಪರಿಶೀಲನೆ ಪ್ರಕ್ರಿಯೆ ಅಗತ್ಯವಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.