ADVERTISEMENT

ಶಾಯಿಯ ಗುಣಮಟ್ಟ ಕುರಿತ ವಾಗ್ವಾದ;ಜನರನ್ನು ಕತ್ತಲಲ್ಲಿಟ್ಟಿರುವ ಆಯೋಗ:ರಾಹುಲ್ ಗಾಂಧಿ

ಚುನಾವಣಾ ಆಯುಕ್ತ ಬಿಜೆಪಿ ಪರ: ಠಾಕ್ರೆ ಆರೋಪ

ಪಿಟಿಐ
Published 16 ಜನವರಿ 2026, 14:07 IST
Last Updated 16 ಜನವರಿ 2026, 14:07 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ನವದೆಹಲಿ: ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳಸಿದ ‘ಮಾರ್ಕರ್‌ ಪೆನ್ನು’ಗಳಲ್ಲಿನ ಶಾಯಿಯ ಗುಣಮಟ್ಟದ ಕುರಿತು ವಾಗ್ವಾದ ತೀವ್ರವಾಗಿರುವ ನಡುವೆಯೇ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ‘ಚುನಾವಣಾ ಆಯೋಗವು ಪ್ರಜೆಗಳ ಮೇಲೆ ಮಾನಸಿಕವಾಗಿ ಒತ್ತಡ ಹೇರುವ ಮೂಲಕ ಅವರನ್ನು ಕತ್ತಲಿನಲ್ಲಿ ಇಡುತ್ತಿದೆ’ ಎಂದು  ಆರೋಪಿಸಿದ್ದಾರೆ.

ಅಲ್ಲದೆ ‘ಮತಕಳವು ಎಂಬುದು ರಾಷ್ಟ್ರ ವಿರೋಧಿ ಕೃತ್ಯವಾಗಿದೆ’ ಎಂದೂ ಅವರು ದೂರಿದ್ದಾರೆ.

ADVERTISEMENT

‘ಪ್ರಜೆಗಳನ್ನು ಕತ್ತಲಲ್ಲಿ ಇಡುವಂತೆ ಮಾಡುವ ಮೂಲಕ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಮೇಲೆ ಜನರ ನಂಬಿಕೆ ಕುಸಿಯುವಂತೆ ಮಾಡುತ್ತಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಕಿಡಿಕಾರಿದ್ದಾರೆ. ಮಹಾರಾಷ್ಟ್ರದಲ್ಲಿ ಮತದಾನದ ಬಳಿಕ ಶಾಯಿಯನ್ನು ಅಳಿಸಿದ ಕುರಿತ ಮಾಧ್ಯಮ ವರದಿಯನ್ನು ಅವರು ಹಂಚಿಕೊಂಡಿದ್ದಾರೆ.   

ಅಮಾನತಿಗೆ ಉದ್ಧವ್‌ ಠಾಕ್ರೆ ಆಗ್ರಹ

‘ಬೆರಳಿಗೆ ಹಚ್ಚಿದ ಶಾಯಿಯನ್ನು ಸುಲಭವಾಗಿ ಅಳಿಸಬಹುದು ಎಂಬುದು ಆಘಾತಕಾರಿ ವಿಷಯ. ರಾಜ್ಯ ಚುನಾವಣಾ ಆಯುಕ್ತರು ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಯ ಪರ ಇದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು’ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಆಗ್ರಹಿಸಿದ್ದಾರೆ. 

ಬೃಹನ್‌ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಸೇರಿದಂತೆ ರಾಜ್ಯದ 29 ಪಾಲಿಕೆಗಳಿಗೆ ನಡೆದ ಮತದಾನದ ವೇಳೆ ಬಳಿಯಲಾಗಿದ್ದ ಶಾಯಿಯನ್ನು ‘ಅಸಿಟೋನ್‌’ ರೀತಿಯ ರಾಸಾಯನಿಕಗಳನ್ನು ಬಳಸಿ ಸುಲಭವಾಗಿ ಅಳಿಸಿದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿವೆ. ಆದರೆ ಈ ಕುರಿತು ಆರೋಪಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಳ್ಳಿಹಾಕಿದ್ದಾರೆ. 

ರಾಹುಲ್‌ ‘ಖಾಂದಾನಿ ಚೋರ್‌’: ಬಿಜೆಪಿ ಆರೋಪ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಹುಲ್‌ ಅವರನ್ನು ‘ಖಾಂದಾನಿ ಚೋರ್‌’ (ವಂಶಪಾರಂಪರ್ಯ ಕಳ್ಳ) ಎಂದು ಜರಿದಿದೆ.  ‘ರಾಹುಲ್‌ ಅವರು ಮಹಾರಾಷ್ಟ್ರದಲ್ಲಿ ಮತಎಣಿಕೆ ಪ್ರಕ್ರಿಯೆ ಚಾಲ್ತಿಯಿದ್ದಾಗಲೇ ಅದನ್ನು ಅಪಖ್ಯಾತಿಗೊಳಿಸುವ ಮೂಲಕ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ’ ಎಂದು ಆರೋಪಿಸಿದೆ. 

‘ನೆಪ ಹೇಳುವವರು ಮತ್ತೆ ಬಂದಿದ್ದಾರೆ. ಎಣಿಕೆ ಮುಗಿಯುವ ಮೊದಲೇ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆಯೇ?’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನವಾಲಾ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.  ‘ಚುನಾವಣಾ ವ್ಯವಸ್ಥೆಯನ್ನು ಅಪಖ್ಯಾತಿಗೊಳಿಸುವ ವಿರೂಪಗೊಳಿಸುವ ಜತೆಗೆ ತಪ್ಪು ಮಾಹಿತಿ ಹರಡುವ ಕೆಲಸವನ್ನು ರಾಹುಲ್‌ ಮತ್ತೆ ಮಾಡುತ್ತಿದ್ದಾರೆ. ಅವರೀಗ ಠಾಕ್ರೆಗಳ ಹೇಳಿಕೆಗಳನ್ನೂ ಪುನರುಚ್ಚರಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.