ನವದೆಹಲಿ: ಸಂಸತ್ತಿನಲ್ಲಿ ‘ಆಪರೇಷನ್ ಸಿಂಧೂರ’ದ ಬಗ್ಗೆ ಸೋಮವಾರ ಚರ್ಚೆ ಆರಂಭಗೊಳ್ಳುವ ಮುನ್ನವೇ, ಸಂಸತ್ತಿನ ‘ಮಕರ ದ್ವಾರ’ದ ಎದುರು ಇಂಡಿಯಾ ಕೂಟದ ಸಂಸದರು, ಚುನಾವಣಾ ಆಯೋಗದ (ಇ.ಸಿ) ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಖಂಡಿಸಿರುವ ಇಂಡಿಯಾ ಕೂಟವು, ಇದರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹೇಳಿದೆ.
ಇಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಜೆಡಿ, ಕಾಂಗ್ರೆಸ್, ಸಿಪಿಎಂ ಪಕ್ಷದ ಮುಖಂಡರು ಇ.ಸಿ ವಿರುದ್ಧ ವಾಗ್ದಾಳಿ ನಡೆಸಿದರು. ಪೌರತ್ವ ಪರಿಶೀಲನೆ ಕಡ್ಡಾಯವಲ್ಲದ ಸಂದರ್ಭದಲ್ಲಿ ಆಯೋಗವು ‘ಎಸ್‌ಐಆರ್’ ಮೂಲಕ ದೊಡ್ಡ ಸಂಖ್ಯೆಯ ಮತದಾರರನ್ನು ಹೊರಗಿಡಲು ಕಸರತ್ತು ನಡೆಸುತ್ತಿದೆ ಎಂದು ದೂರಿದರು.
‘ಮತದಾರರ ಪಟ್ಟಿಯಲ್ಲಿ ಕಳೆದ 6 ತಿಂಗಳಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಾಗಿದೆ. ಇದರ ಅರ್ಥ 22 ಲಕ್ಷಕ್ಕೂ ಹೆಚ್ಚು ಮತದಾರರು ನಿಧನರಾಗಿದ್ದಾರೆ ಎನ್ನುವುದೇ? ಹಾಗಾದರೆ ಚುನಾವಣಾ ಆಯೋಗದ ಮತದಾರರ ಪರಿಷ್ಕರಣೆ ವಿಫಲವಾಗಿದೆಯಲ್ಲವೇ’ ಎಂದು ಸಿಪಿಎಂಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.