
ಮತದಾರರ ಬೆರಳಿಗೆ ಶಾಯಿ ಹಚ್ಚುತ್ತಿರುವುದು
ಕೃಪೆ: ಪಿಟಿಐ
ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಮತದಾರರ ಬೆರಳಿಗೆ ಮಾರ್ಕರ್ ಪೆನ್ನುಗಳ ಮೂಲಕ ಹಾಕಿದ್ದ ಶಾಯಿ ಅಳಿಸಿಹೋದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ. ಮುಂದಿನ ತಿಂಗಳು ನಿಗದಿಯಾಗಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸಾಂಪ್ರದಾಯಿಕ ಶಾಯಿ ಹಚ್ಚಲು ನಿರ್ಧರಿಸಿದೆ.
ಬೃಹನ್‌ಮುಂಬೈ ಮಹಾನಗರ ಪಾಲಿಕೆಯೂ (ಬಿಎಂಸಿ) ಸೇರಿದಂತೆ ರಾಜ್ಯದ 29 ನಗರ ಪಾಲಿಕೆಗಳಲ್ಲಿ ಗುರುವಾರ (ಜ.15) ಮತದಾನ ನಡೆದಿದೆ.
ಮಹಾರಾಷ್ಟ್ರದ 12 ಜಿಲ್ಲಾ ಪಂಚಾಯಿತಿಗಳು ಹಾಗೂ 125 ಪಂಚಾಯಿತಿ ಸಮಿತಿಗಳಿಗೆ ಮುಂದಿನ ತಿಂಗಳು 5ರಂದು ಚುನಾವಣೆ ನಿಗದಿಯಾಗಿದೆ.
ಅಳಿಸಲಾಗದ ಶಾಯಿ ಇರುವ ಮಾರ್ಕರ್ ಪೆನ್ನುಗಳನ್ನು ಕೊರೆಸ್ ಇಂಡಿಯಾ ಲಿಮಿಟೆಡ್‌ನಿಂದ ಖರೀದಿಸಲಾಗುತ್ತಿದ್ದು, ಮಹಾರಾಷ್ಟ್ರದ ಪಾಲಿಕೆ ಚುನಾವಣೆಗಳಿಗೆ 2011ರಿಂದಲೂ ಬಳಸಲಾಗುತ್ತಿದೆ.
ಕರ್ನಾಟಕದಿಂದ ಶಾಯಿ
ಮಹಾರಾಷ್ಟ್ರದಲ್ಲಿ 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅದನ್ನು ಪುಷ್ಟೀಕರಿಸುವಂತೆ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಯೂ ವಿವಾದ ಸೃಷ್ಟಿಯಾಗಿದೆ.
ಮತದಾರರ ಬೆರಳಿಗೆ ಮಾರ್ಕರ್ ಪೆನ್ನುಗಳಲ್ಲಿ ಹಾಕಿರುವ ಶಾಯಿ ಅಳಿಸಿ ಹೋಗಿರುವ ಆರೋಪಗಳು ಹಲವೆಡೆ ಕೇಳಿ ಬಂದಿವೆ. ಅಸಿಟೋನ್ ಬಳಸಿ ಶಾಯಿಯನ್ನು ಅಳಿಸಿರುವ ವಿಡಿಯೊವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ತಿಳಿಸಿದ್ದಾರೆ. 'ರಾಜ್ಯ ಚುನಾವಣಾ ಆಯೋಗವು ಇನ್ನುಮುಂದೆ ಮಾರ್ಕರ್ ಪೆನ್ನುಗಳನ್ನು ಬಳಸುವುದಿಲ್ಲ. ಕರ್ನಾಟಕ ಸರ್ಕಾರದ ಮೈಸೂರ್ ಪೇಯಿಂಟ್ಸ್ ಅಂಡ್ ವರ್ನಿಷ್ ಲಿಮಿಟೆಡ್ ಉತ್ಪಾದಿಸುವ ಸಾಂಪ್ರದಾಯಿಕ ಶಾಯಿಯನ್ನು ಮುಂಬರುವ ಚುನಾವಣೆಗಳಲ್ಲಿ ಬಳಸಲಾಗುವುದು. ಆ ಶಾಯಿಯನ್ನೇ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗೂ ಬಳಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.
'ಸ್ಥಳೀಯ ಸಂಸ್ಥೆಗಳ ಚುನಾವಣಾ ವಿವಾದದ ಕುರಿತು ತನಿಖೆ ನಡೆಸುತ್ತಿದ್ದೇವೆ. ಮಾರ್ಕರ್ ಪೆನ್ನುಗಳ ಗುಣಮಟ್ಟ ಹಾಗೂ ದಿನವಿಡೀ ಹರಿದಾಡಿರುವ ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲಿಸಲಾಗುವುದು' ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.