ADVERTISEMENT

ಚುನಾವಣೆ ಸಮೀಪಿಸಿದೆ, ಮನೆಯಿಂದ ಹೊರಗೆ ಬನ್ನಿ: ಪ್ರಿಯಾಂಕಾ ವಿರುದ್ಧ ಶಾ ಹೇಳಿಕೆ

ಸಂಜಯ ಪಾಂಡೆ
Published 30 ಡಿಸೆಂಬರ್ 2021, 15:32 IST
Last Updated 30 ಡಿಸೆಂಬರ್ 2021, 15:32 IST
ಅಮಿತ್ ಶಾ
ಅಮಿತ್ ಶಾ   

ಲಖನೌ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು 'ಬೆಹೆನ್ ಜೀ' ಎಂದು ಸಂಬೋಧಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣೆ ಸಮೀಪಿಸಿದೆ, ಮನೆಯಿಂದ ಹೊರಗೆ ಬನ್ನಿ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಗುರುವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಅಖಿಲೇಶ್ ಯಾವದ್, ಮಾಯಾವತಿ ಹಾಗೂ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಿಯಾಂಕಾ ಗಾಂಧಿ ಅವರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ಬೆಹೆನ್ ಜೀಗೆ ನೆಗಡಿ ಆದಂತಿದೆ...ಚುನಾವಣೆ ಸಮೀಪಿಸಿದೆ...ಮನೆಯಿಂದ ಹೊರಗೆ ಬನ್ನಿ' ಎಂದು ಹೇಳಿದ್ದಾರೆ.

'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದವರು ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ನೀವು ಅಂದುಕೊಂಡಿದ್ದರೆಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ ನೀಡಿ' ಎಂದು ಮನವಿ ಮಾಡಿದರು.

'ಹಿಂದಿನ ಸರ್ಕಾರಗಳು ಅಧಿಕಾರದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದನಾ ದಾಳಿ ನಡೆದಾಗ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಧೈರ್ಯ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಪರಿಸ್ಥಿತಿ ಬದಲಾಯಿತು. ಉರಿ ಹಾಗೂ ಪುಲ್ವಾಮಾ ದಾಳಿಯ ಬಳಿಕ ನಾವು ಪಾಕ್‌ಗೆ ನುಗ್ಗಿ ದಾಳಿ ನಡೆಸಿದೆವು' ಎಂದು ಹೇಳಿದರು.

'ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಖಿಲೇಶ್, ಮಾಯಾವತಿ ಮತ್ತು ಪ್ರಿಯಾಂಕಾ ಕೈಜೋಡಿಸಿಕೊಂಡರೂ ಬಿಜೆಪಿ ಗೆಲುವು ದಾಖಲಿಸಲಿದೆ. ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡರೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ' ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.