ADVERTISEMENT

ಚುನಾವಣಾ ಬಾಂಡ್ ಬಿಜೆಪಿಯ ವೈಟ್ ಕಾಲರ್ ಕರಪ್ಷನ್; ಸ್ಟಾಲಿನ್ ಕಿಡಿ

ಪಿಟಿಐ
Published 17 ಮಾರ್ಚ್ 2024, 16:12 IST
Last Updated 17 ಮಾರ್ಚ್ 2024, 16:12 IST
ಎಂ.ಕೆ. ಸ್ಟಾಲಿನ್: ಪಿಟಿಐ ಚಿತ್ರ
ಎಂ.ಕೆ. ಸ್ಟಾಲಿನ್: ಪಿಟಿಐ ಚಿತ್ರ   

ಮುಂಬೈ: ಚುನಾವಣಾ ಬಾಂಡ್ ಯೋಜನೆಯು ಬಿಜೆಪಿಯ ವೈಟ್ ಕಾಲರ್ ಕರಪ್ಷನ್ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ವಿರೋಧ ಪಕ್ಷಗಳ ಇಂಡಿಯಾ ಬಣದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಬಣವು ಜಾತ್ಯತೀತ, ಒಕ್ಕೂಟ ವ್ಯವಸ್ಥೆಯ ಮತ್ತು ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ಕೇಂದ್ರದಲ್ಲಿ ರಚಿಸಲಿದೆ ಎಂದು ಹೇಳಿದರು.

‘ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶ ಪ್ರವಾಸ ಮತ್ತು ಸುಳ್ಳು ಪ್ರಚಾರ ಮಾತ್ರ ಮಾಡಿದ್ದಾರೆ. ಅದಕ್ಕೆ ನಾವು ಅಂತ್ಯ ಹಾಡಬೇಕು’ ಎಂದಿದ್ದಾರೆ.

ADVERTISEMENT

ವಿರೋಧ ಪಕ್ಷಗಳ ಬಣಕ್ಕೆ ಇಂಡಿಯಾ ಎಂಬ ಹೆಸರಿಟ್ಟ ಬಳಿಕ ಬಿಜೆಪಿ ಇಂಡಿಯಾ ಪದ ಬಳಕೆಯನ್ನೇ ಕೈಬಿಟ್ಟಿದೆ. ಅದು ಅವರ ಭಯ ಎಂದು ಕುಟುಕಿದ್ದಾರೆ.

‘ಭ್ರಷ್ಟರೆಂದು ಹೇಳುತ್ತಾ ಪ್ರಧಾನಿ ನರೇಂದ್ರ ಮೋದಿ ನಮಗೆ ಕಳಂಕ ಹಚ್ಚಲು ಯತ್ನಿಸಿದರು. ಆದರೆ, ಬಿಜೆಪಿ ಭ್ರಷ್ಟ ಪಕ್ಷ ಎಂುುದನ್ನು ಚುನಾವಣಾ ಬಾಂಡ್‌ಗಳು ಸಾಬೀತು ಮಾಡಿವೆ. ಇದು ಬಿಜೆಪಿಯ ವೈಟ್ ಕಾಲರ್ ಕರಪ್ಷನ್’ ಎಂದು ಅವರು ಆರೋಪಿಸಿದ್ದಾರೆ.

ಭಾರತಕ್ಕೆ ಬಿಜೆಪಿಗಿಂತ ದೊಡ್ಡ ಅಪಾಯ ಇನ್ನೊಂದಿಲ್ಲ. ನಾವು ಬಿಜೆಪಿಯನ್ನು ಸೋಲಿಸಬೇಕು ಎಂದಿದ್ದಾರೆ.

ದೇಶವನ್ನು ಉಳಿಸಲು ಇಂಡಿಯಾ ಬಣದ ನಾಯಕರು ಒಂದಾಗಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

‘ನಾವೆಲ್ಲರೂ ಇಲ್ಲಿ ಒಟ್ಟಾಗಿರುವುದು ಏಕೆಂದರೆ ನಮಗೆ ಜೈಲಿಗೆ ಹೋಗುತ್ತೇವೆಂಬ ಭಯವಿಲ್ಲ, ಗೆಲುವಿಗಾಗಿ ನಾವು ಹೋರಾಡಬೇಕು’ ಎಂದು ದೆಹಲಿ ಆರೋಗ್ಯ ಸಚಿವ, ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಚುನಾವಣಾ ಬಾಂಡ್‌ಗಳು ಬಿಜೆಪಿಯ ಬಣ್ಣ ಬಯಲು ಮಾಡಿವೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದಿದ್ದಾರೆ.

ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ₹6,986.5 ಕೋಟಿ

2019ರ ಏಪ್ರಿಲ್ 12ಕ್ಕೂ ಹಿಂದಿನ ಚುನಾವಣಾ ಬಾಂಡ್ ಅಂಕಿ ಅಂಶವನ್ನು ಇಂದು ಚುನಾವಣಾ ಆಯೋಗ ಬಹಿರಂಗಪಡಿಸಿದ್ದು, ಈ ಹೊಸ ಅಂಕಿ ಅಂಶಗಳ ಪ್ರಕಾರ, ಕೇಂದ್ರದ ಆಡಳಿತಾರೂಢ ಬಿಜೆಪಿ, ಚುನಾವಣಾ ಬಾಂಡ್‌ಗಳ ಮೂಲಕ ₹6,986.5 ಕೋಟಿ ಪಡೆದುಕೊಂಡಿದೆ. 2019–20ರ ಅವಧಿಯಲ್ಲಿ ಅತ್ಯಧಿಕ ₹2,555 ಕೋಟಿ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ತೃಣಮೂಲ ಕಾಂಗ್ರೆಸ್ ಪಕ್ಷವು 2ನೇ ಸ್ಥಾನದಲ್ಲಿದ್ದು, ಚುನಾವಣಾ ಬಾಂಡ್ ಮೂಲಕ ₹1,397 ಕೋಟಿ ಪಡೆದುಕೊಂಡಿದೆ.ಕಾಂಗ್ರೆಸ್ ₹1,334.35 ಕೋಟಿ ಪಡೆದಿದೆ.

ಡಿಎಂಕೆ ಪಕ್ಷ ₹656.5 ಕೋಟಿ ಪಡೆದುಕೊಂಡಿದ್ದರೆ, ಅದರಲ್ಲಿ ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ಸ್ ಫ್ಯೂಚರ್ ಗೇಮಿಂಗ್‌ನಿಂದಲೇ ₹ 509 ಕೋಟಿ ಚುನಾವಣಾ ಬಾಂಡ್‌ನಿಂದ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.