ADVERTISEMENT

ಮೂರು ಹೈಕೋರ್ಟ್‌ಗಳಿಗೆ 13 ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

ಕರ್ನಾಟಕ ಸೇರಿ ಮೂರು ಹೈಕೋರ್ಟ್‌ಗಳಿಗೆ ನೇಮಕ * ಕಾನೂನು ಸಚಿವರಿಂದ ಟ್ವೀಟ್

ಪಿಟಿಐ
Published 6 ಫೆಬ್ರುವರಿ 2023, 14:35 IST
Last Updated 6 ಫೆಬ್ರುವರಿ 2023, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನ್ಯಾಯಾಂಗದ ಇಬ್ಬರು ಅಧಿಕಾರಿಗಳು ಮತ್ತು 13 ಮಂದಿ ವಕೀಲರನ್ನು ಕರ್ನಾಟಕ ಹೈಕೋರ್ಟ್ ಸೇರಿದಂತೆ ಮೂರು ಹೈಕೋರ್ಟ್‌ಗಳಿಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.

ಅಲಹಾಬಾದ್‌ ಹೈಕೋರ್ಟ್‌ಗೆ ಆರು, ಮದ್ರಾಸ್‌ ಹೈಕೋರ್ಟ್‌ಗೆ ಐವರು ಮತ್ತು ಕರ್ನಾಟಕ ಹೈಕೋರ್ಟ್‌ಗೆ ಇಬ್ಬರನ್ನು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ. ಕಾನೂನು ಸಚಿವ ಕಿರಣ್‌ ರಿಜಿಜು, ಈ ಸಂಬಂಧ ಟ್ವೀಟ್ ಮಾಡಿದ್ದಾರೆ.

ಮದ್ರಾಸ್‌ ಹೈಕೋರ್ಟ್‌ಗೆ ನೇಮಕಗೊಂಡ ಐವರಲ್ಲಿ ಇಬ್ಬರು ನ್ಯಾಯಾಂಗ ಅಧಿಕಾರಿಗಳು. ಇವರ ಪೈಕಿ ಕೆಲವು ಹೆಸರುಗಳನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಕಳೆದ ತಿಂಗಳು ಶಿಫಾರಸು ಮಾಡಿತ್ತು.

ADVERTISEMENT

ನೇಮಕದ ಹಿಂದೆಯೇ ವಿವಾದ: ಮದ್ರಾಸ್‌ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ವಕೀಲ ಲೇಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರು ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದರು ಎಂಬುದು ವಿವಾದಕ್ಕೆ ಆಸ್ಪದವಾಗಿದೆ.

ಗೌರಿ ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಕಾರಣ ಅವರ ಹೆಸರು ಶಿಫಾರಸು ಮಾಡಿದ್ದನ್ನು ಹಿಂಪಡೆಯಬೇಕು ಎಂದು ಕೆಲ ವಕೀಲರು ಇತ್ತೀಚೆಗೆ ಕೊಲಿಜಿಯಂಗೆ ಕೋರಿದ್ದರು. ಆದರೆ, ಆಕೆಯ ವೃತ್ತಿ ಬದ್ಧತೆಯನ್ನು ಉಲ್ಲೇಖಿಸಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡುವುದಕ್ಕೆ ವಕೀಲರ ಮತ್ತೊಂದು ವರ್ಗ ಬೆಂಬಲಿಸಿತ್ತು.

ಸಾಮಾನ್ಯವಾಗಿ ಪೂರ್ಣಾವಧಿ ನ್ಯಾಯಮೂರ್ತಿಯಾಗಿ ನೇಮಿಸುವುದಕ್ಕೆ ಪೂರ್ವಭಾವಿಯಾಗಿ ಎರಡು ವರ್ಷಗಳ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗುತ್ತದೆ.

ಗೌರಿ ನೇಮಕ ಪ್ರಶ್ನಿಸಿ ತಕರಾರು

ನವದೆಹಲಿ: ಮದ್ರಾಸ್ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ವಕೀಲೆ ಲೇಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರ ನೇಮಕ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ಫೆ.10ರ ಬದಲಿಗೆ 7ರಂದೇ ಸುಪ್ರೀಂ ಕೋರ್ಟ್‌ ನಡೆಸಲಿದೆ.

ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂಬ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, ಜೆ.ಬಿ.ಪಾರ್ದಿವಾಲ ಅವರಿದ್ದ ಪೀಠವು ಮಾನ್ಯ ಮಾಡಿತು.

ಗೌರಿ ಅವರನ್ನು ನೇಮಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂಬುದನ್ನು ಹಿರಿಯ ವಕೀಲ ರಾಜು ರಾಮಚಂದ್ರನ್‌ ಅವರು ಪೀಠದ ಗಮನಕ್ಕೆ ತಂದರು.

ಬೆಳವಣಿಗೆಯನ್ನು ಗಮನಿಸಿದ್ದೇವೆ. ನಾಳೆಯೇ ವಿಚಾರಣೆಗೆ ತೆಗೆದುಕೊಳ್ಳಲಿದ್ದು, ಪೀಠ ರಚಿಸಲಾಗುವುದು ಎಂದು ಸಿಜೆಐ ನೇತೃತ್ವದ ಪೀಠ ಹೇಳಿತು. ಇದಕ್ಕೂ ಮೊದಲು ಗೌರಿ ನೇಮಕವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ 10ಕ್ಕೆ ನಿಗದಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.