ADVERTISEMENT

ವೈದ್ಯಕೀಯ ಪರೀಕ್ಷೆಗೆ ಅವಕಾಶ ಕೋರಿ ಹೈಕೋರ್ಟ್‌ಗೆ ಗೌತಮ್ ನವ್‌ಲಖಾ ಅರ್ಜಿ

ಪಿಟಿಐ
Published 2 ಸೆಪ್ಟೆಂಬರ್ 2021, 11:05 IST
Last Updated 2 ಸೆಪ್ಟೆಂಬರ್ 2021, 11:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಎಲ್ಗಾರ್ ಪರಿಷತ್‌ ಪ್ರಕರಣದಲ್ಲಿ ಆರೋಪಿಯಾಗಿ, ಪ್ರಸ್ತುತ ತಲೋಜಾ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್‌ಲಖಾ ಅವರು, ವೈದ್ಯಕೀಯ ಪರೀಕ್ಷೆ ನಡೆಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಹಾಗೂ ವಯಸ್ಸು, ವೈದ್ಯಕೀಯ ಆಧಾರದ ಮೇಲೆ ತಮ್ಮನ್ನು ಗೃಹಬಂಧನದಲ್ಲಿ ಇರಿಸಿ ಚಿಕಿತ್ಸೆ ಕೊಡಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

69 ವರ್ಷದ ಗೌತಮ್ ನವಲಖಾ ಅವರು, ‘ಎದೆಯಲ್ಲಿ ಗಡ್ಡೆ ಬೆಳೆದಿರುವ ಕಾರಣ, ತಮ್ಮನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ. ಗೌತಮ್‌ ಪರ ವಕೀಲರಾದ ಯುಗ್‌ ಚೌಧರಿ ಮತ್ತು ಪಯೋಶಿ ರಾಯ್, ‘ನವ್‌ಲಖಾ ಅವರು ತಮಗೆ ಕ್ಯಾನ್ಸರ್‌ ಇರುವುದರ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಬಯಸಿದ್ದಾರೆ‘ ಎಂದು ನ್ಯಾಯಮೂರ್ತಿ ಎಸ್‌.ಎಸ್‌.ಶಿಂಧೆ ಮತ್ತು ಎನ್‌.ಜೆ.ಜಾಮ್ದಾರ್ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.

ಇದಕ್ಕೂ ಮುನ್ನ, ನವ್‌ಲಖಾ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿದ್ದರು. ಆ ಆದೇಶದಲ್ಲಿ ‘ಈಗಾಗಲೇ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಕಾರಾಗೃಹ ಬಂಧನಕ್ಕೆ ಪರ್ಯಾಯವಾಗಿ ಗೃಹ ಬಂಧನದಲ್ಲಿಟ್ಟು ಚಿಕಿತ್ಸೆ ನೀಡುಬಹುದು ಎಂದು ತಿಳಿಸಿತ್ತು. ಅದರಲ್ಲೂ ವಯಸ್ಸಾದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಈ ಪರ್ಯಾಯ ಅವಕಾಶ ಕಲ್ಪಿಸಬಹುದು ಎಂದು ಹೇಳಿತ್ತು.

ADVERTISEMENT

ನವ್‌ಲಖಾ ಅವರ ವಕೀಲರು, ‘ನಾವು ಈಗಾಗಲೇ ಗೌತಮ್ ಅವರ ಎದೆಯಲ್ಲಿರುವ ಗಡ್ಡೆಯನ್ನು ಪರೀಕ್ಷಿಸುವಂತೆ ತಲೋಜಾ ಬಂದಿಖಾನೆ ಅಧಿಕಾರಿಗಳಿಗೆ ಪತ್ರ ಬರೆದು ಕೇಳಿದ್ದೇವೆ. ಆದರೆ, ಅವರು ಇಲ್ಲಿವರೆಗೂ ಪ್ರತಿಕ್ರಿಯಿಸಿಲ್ಲ‘ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಜೊತೆಗೆ, ಜೈಲಿನಲ್ಲಿದ್ದಾಗ ಅವರಿಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.