ADVERTISEMENT

ಎಲ್ಲೋರಾ ಗುಹೆಯಲ್ಲಿ ನೀರು ಸೋರಿಕೆ: 9ನೇ ಶತಮಾನದ ವರ್ಣಚಿತ್ರಗಳಿಗೆ ಅಪಾಯದ ಭೀತಿ

ಪಿಟಿಐ
Published 6 ಆಗಸ್ಟ್ 2025, 12:46 IST
Last Updated 6 ಆಗಸ್ಟ್ 2025, 12:46 IST
<div class="paragraphs"><p>ಎಲ್ಲೋರಾ ಗುಹೆಗಳು</p></div>

ಎಲ್ಲೋರಾ ಗುಹೆಗಳು

   

Credit: iStock Photo

ಮುಂಬೈ: ‘ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ವಿಶ್ವಪ್ರಸಿದ್ಧ ಎಲ್ಲೋರಾ ಸಂಕೀರ್ಣದ 32ನೇ ಗುಹೆಯಲ್ಲಿ ನೀರು ಸೋರುತ್ತಿದ್ದು, 9ನೇ ಶತಮಾನದ ಪ್ರಮುಖ ವರ್ಣಚಿತ್ರಗಳಿಗೆ ಅಪಾಯವಾಗುವ ಸಾಧ್ಯತೆ ಇದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಗುಹೆಯಲ್ಲಿ ಸ್ವಾಭಾವಿಕವಾಗಿ ನೀರು ಸೋರಿಕೆಯಾಗುತ್ತಿದೆ. ಕಳೆದ ವರ್ಷವೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಸೋರುತ್ತಿರುವುದು ಎಲ್ಲಿಂದ ಎಂದು ಪರಿಶೀಲನೆ ನಡೆಸಲಾಗಿತ್ತು. ಆದರೆ, ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಸಮಸ್ಯೆಯನ್ನು ಪರಿಹರಿಸಲು ಸಂರಕ್ಷಣಾ ವಿಭಾಗಕ್ಕೆ ಪತ್ರ ಬರೆದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಛತ್ರಪತಿ ಸಂಭಾಜಿನಗರದಿಂದ 30 ಕಿಲೋಮೀಟರ್ ದೂರದಲ್ಲಿರುವ ಎಲ್ಲೋರಾ ಗುಹೆ ಸಂಕೀರ್ಣವು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿದೆ. ಇದು ಹಿಂದೂ, ಜೈನ ಮತ್ತು ಬೌದ್ಧ ಗುಹೆಗಳ ಗುಂಪನ್ನು ಒಳಗೊಂಡಿದೆ.

‘ಕಳೆದ ವರ್ಷ ಇದೇ ರೀತಿಯ ಸಮಸ್ಯೆ ಕಂಡುಬಂದಾಗ ದುರಸ್ತಿ ಕಾರ್ಯ ನಡೆಸಲಾಗಿತ್ತು. ಆದರೆ, ನೀರು ಸೋರಿಕೆಯನ್ನು ಶಾಶ್ವತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವರ್ಣಚಿತ್ರಗಳಿಗೆ ಹಾನಿಯಾಗಲಿದೆ’ ಎಂದು ಇತ್ತೀಚೆಗೆ ಜೈನ ಗುಹೆ ಸಂಖ್ಯೆ 32ಕ್ಕೆ ಭೇಟಿ ನೀಡಿದ್ದ ಪ್ರವಾಸಿ ಮಾರ್ಗದರ್ಶಿಯೊಬ್ಬರು ಹೇಳಿದ್ದಾರೆ.

‘ಎಲ್ಲೋರಾವು ಅಜಂತಾ ಗುಹೆಗಳಿಗಿಂತ ಭಿನ್ನವಾಗಿದೆ. ಎಲ್ಲೋರಾದಲ್ಲಿ ವರ್ಣಚಿತ್ರಗಳನ್ನು ಹೊಂದಿರುವ ಗುಹೆಗಳು ಬಹಳ ಕಡಿಮೆ ಇವೆ. ನೀರು ಸೋರಿಕೆ ಸಂಬಂಧ ನಾವು ಈಗಾಗಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಪತ್ರ ಬರೆದಿದ್ದೇವೆ’ ಎಂದು ಪಾರಂಪರಿಕ ಸಂಸ್ಥೆ INTACHನ ಸಹ ಸಂಚಾಲಕ ಸ್ವಪ್ನಿಲ್ ಜೋಶಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.