ADVERTISEMENT

ರಷ್ಯಾ–ಉಕ್ರೇನ್‌ ಸಂಘರ್ಷದ ಕುರಿತ ಚರ್ಚೆಗೆ ಒತ್ತು

ಜಿ–20: ಇಂದು ವಿದೇಶಾಂಗ ಸಚಿವರ ಮಹತ್ವದ ಸಭೆ

ಪಿಟಿಐ
Published 2 ಮಾರ್ಚ್ 2023, 5:02 IST
Last Updated 2 ಮಾರ್ಚ್ 2023, 5:02 IST
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ (ಬಲ) ಅವರು ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವರೊವ್‌ ಜೊತೆ ಮಾತುಕತೆ ನಡೆಸಿದ ಬಳಿಕ ಕೈಕುಲುಕಿದರು–ಪಿಟಿಐ ಚಿತ್ರ 
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ (ಬಲ) ಅವರು ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವರೊವ್‌ ಜೊತೆ ಮಾತುಕತೆ ನಡೆಸಿದ ಬಳಿಕ ಕೈಕುಲುಕಿದರು–ಪಿಟಿಐ ಚಿತ್ರ    

ನವದೆಹಲಿ (ಪಿಟಿಐ/ಎಎಫ್‌ಪಿ): ಭಾರತವು ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿ ವಿವಿಧ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರ ಹಂತದಲ್ಲಿ ಮಹತ್ವದ ಸಭೆ ನಡೆಯಲಿದೆ. ರಷ್ಯಾ–ಉಕ್ರೇನ್‌ ನಡುವಣ ಸಂಘರ್ಷವು ಈ ಸಭೆಯ ಪ್ರಮುಖ ಚರ್ಚೆಯ ವಿಷಯವಾಗಿದೆ.

ಜಗತ್ತಿನ ದೊಡ್ಡ ಆರ್ಥಿಕತೆಯ ರಾಷ್ಟ್ರಗಳ ನಡುವೆ ಏಕತೆಯನ್ನು ಒಡಮೂಡಿಸುವ ಪ್ರಯತ್ನಕ್ಕೆ ಭಾರತ ಕೈಹಾಕಿದೆ. ಆದರೆ ರಷ್ಯಾ–ಉಕ್ರೇನ್‌ ನಡುವಣ ಬಿಕ್ಕಟ್ಟು ಆತಿಥೇಯರ ಈ ಪ್ರಯತ್ನಕ್ಕೆ ಅಡ್ಡಿ ಉಂಟುಮಾಡುವ ಸಾಧ್ಯತೆಯೇ ಹೆಚ್ಚಿದೆ.

ರಷ್ಯಾ ಹಾಗೂ ಚೀನಾದ ವಿದೇಶಾಂಗ ಸಚಿವರನ್ನು ಭೇಟಿಯಾಗುವ ಯಾವ ಆಲೋಚನೆಯೂ ಇಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಉಕ್ರೇನ್‌ ಬಿಕ್ಕಟ್ಟನ್ನು ಶಮನಗೊಳಿಸುವ ಭರವಸೆಯನ್ನು ರಷ್ಯಾ ನೀಡಿದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಸದ್ಯಕ್ಕಂತೂ ಅಂತಹ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಸಭೆಯಲ್ಲಿ ಯಾವೆಲ್ಲಾ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಸಭೆಯಲ್ಲಿ ಪಾಲ್ಗೊಳ್ಳಲಿರುವ ಬಹುತೇಕ ಸಚಿವರು ರಷ್ಯಾ ಮತ್ತು ಉಕ್ರೇನ್‌ ನಡುವಣ ಸಂಘರ್ಷದ ಕುರಿತ ಚರ್ಚೆಗೆ ಬಿಗಿಪಟ್ಟು ಹಿಡಿಯುವುದು ಸಹಜ. ಈ ಬಿಕ್ಕಟ್ಟಿನಿಂದಾಗಿ ಆಹಾರ, ಇಂಧನ, ರಸಗೊಬ್ಬರದ ಭದ್ರತೆಯ ಮೇಲೆ ಉಂಟಾಗಿರುವ ಪ್ರತಿಕೂಲ ಪರಿಣಾಮದ ಕುರಿತೂ ಚರ್ಚೆ ನಡೆಯುವ ನಿರೀಕ್ಷೆ ಇದೆ’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ತಿಳಿಸಿದ್ದಾರೆ.

‘ಸದ್ಯ ಜಗತ್ತು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತ ಚರ್ಚೆಗೂ ವಿದೇಶಾಂಗ ಸಚಿವರು ಆದ್ಯತೆ ನೀಡಲಿದ್ದಾರೆ ಎಂದು ನಾವು ಭಾವಿಸಿದ್ದೇವೆ’ ಎಂದಿದ್ದಾರೆ.

ಜೈಶಂಕರ್‌ ದ್ವಿಪಕ್ಷೀಯ ಮಾತುಕತೆ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಜಿ–20 ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಬ್ರಿಟನ್‌, ರಷ್ಯಾ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ನೆದರ್ಲೆಂಡ್ಸ್‌, ಅರ್ಜೆಂಟೀನಾ, ನೈಜೀರಿಯಾ ದೇಶಗಳ ವಿದೇಶಾಂಗ ಸಚಿವರ ಜೊತೆ ಬುಧವಾರ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಜೈಶಂಕರ್‌ ಅವರು ಗುರುವಾರ ಚೀನಾದ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಜೊತೆ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.