ADVERTISEMENT

ಕೋವಿಡ್–19 | ಕಣ್ಣಿನ ಚಿಕಿತ್ಸೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

ಪಿಟಿಐ
Published 20 ಆಗಸ್ಟ್ 2020, 21:12 IST
Last Updated 20 ಆಗಸ್ಟ್ 2020, 21:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೋವಿಡ್‌ ಹಿನ್ನೆಲೆಯಲ್ಲಿ ಕಣ್ಣಿನ ತೊಂದರೆಗೆ ಸಂಬಂಧಿಸಿದಂತೆ ದೂರವಾಣಿ ಮೂಲಕವೇ ವೈದ್ಯರ ಸಲಹೆ ಪಡೆಯಿರಿ. ತೀರಾ ಅಗತ್ಯವಿದ್ದರೆ ಮಾತ್ರವೇ ವೈದ್ಯರನ್ನು ಭೇಟಿಯಾಗುವಂತೆ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಸಂಬಂಧ, ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕಂಟೈನ್‌ಮೆಂಟ್‌ ವಲಯಗಳಲ್ಲಿರುವ ಕಣ್ಣಿನ ಆಸ್ಪತ್ರೆಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ.

ಕಣ್ಣಿಗೆ ಸಂಬಂಧಿಸಿದ ಪರೀಕ್ಷೆ ನಡೆಸಲು ವೈದ್ಯರು, ನರ್ಸ್‌ಗಳು ರೋಗಿಗಳೊಂದಿಗೆ ನಿಕಟ ಸಂಪರ್ಕ ಹೊಂದುವುದು ಅಗತ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ಕಣ್ಣಿನ ಶಸ್ತ್ರಚಿಕಿತ್ಸೆಗೆ ಮೊದಲು ಸೋಂಕು ಪತ್ತೆ ಪರೀಕ್ಷೆ ಮಾಡುವುದು ಕಡ್ಡಾಯವಲ್ಲ. ಆದರೆ, ವ್ಯಕ್ತಿಗೆ ಸೋಂಕು ತಗುಲಿರುವ ಸಾಧ್ಯತೆಯ ಪತ್ತೆಗಾಗಿ ಅವರ ಪೂರ್ವಾಪರ ಪರಿಶೀಲಿಸುವಂತೆ ತಿಳಿಸಲಾಗಿದೆ.

ಮೊಬೈಲ್‌ ಅಪ್ಲಿಕೇಷನ್‌ ಮೂಲಕವೇ ವೈದ್ಯರುಔಷಧಿ ಬರೆದು ಕಳುಹಿಸಬೇಕು. ಹಣ ಪಾವತಿಯನ್ನು ಆನ್‌ಲೈನ್‌ ಮೂಲಕವೇ ಮಾಡುವುದರಿಂದ ಆಸ್ಪತ್ರೆಯಲ್ಲಿ ಸರತಿಯಲ್ಲಿ ಕಾಯುವುದನ್ನು ತಪ್ಪಿಸಬಹುದು.ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅಂತರಕಾಯ್ದುಕೊಳ್ಳುವ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ.

ಸೋಂಕು ಶಂಕಿತ ಮತ್ತು ದೃಢಪಟ್ಟ ವ್ಯಕ್ತಿಗಳಿಗೆ ಕಣ್ಣು ಸಂಬಂಧಿತ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆ ನಡೆಸಬಾರದು. ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ಅನಿವಾರ್ಯವಾದರೆ, ಅಂಥವರಿಗೆ ಪ್ರತ್ಯೇಕ ವಾರ್ಡ್‌ ಮೀಸಲಿರಿಸಬೇಕು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.