ADVERTISEMENT

PV Web Exclusive: ದೀರ್ಘ ಇನಿಂಗ್ಸ್‌ ಮುಗಿಸಿದ ‘ವಿರಾಟ್‌’

ನಾಗೇಶ್ ಶೆಣೈ ಪಿ.
Published 18 ಡಿಸೆಂಬರ್ 2020, 13:29 IST
Last Updated 18 ಡಿಸೆಂಬರ್ 2020, 13:29 IST
ಅಂತಿಮ ಯಾನ ಮುಗಿಸಿದ ಐಎನ್‌ಎಸ್‌ ವಿರಾಟ್‌....
ಅಂತಿಮ ಯಾನ ಮುಗಿಸಿದ ಐಎನ್‌ಎಸ್‌ ವಿರಾಟ್‌....   

ಮೊದಲು ಇಂಗ್ಲೆಂಡ್‌ನ ರಾಯಲ್‌ ನೇವಿ, ನಂತರ ಭಾರತದ ನೌಕಾಪಡೆ– ಹೀಗೆ ಒಟ್ಟಾರೆ 57 ವರ್ಷ ಅತೀ ದೀರ್ಘ ಕಾಲ ಸೇವೆ ಸಲ್ಲಿಸಿದ ಈ ಯುದ್ಧನೌಕೆ, ಎರಡು ತಿಂಗಳ ಹಿಂದೆಯೇ ಹಡಗು ಒಡೆಯುವ ಕಟ್ಟೆಯಾಗಿರುವ ಗುಜರಾತ್‌ನ ಭಾವನಗರ ಜಿಲ್ಲೆಯ ಅಲಂಗ್‌ ಸೇರಿಕೊಂಡಿದೆ.

‘ಕಡಲನ್ನು ಆಳುವವ ಎಲ್ಲರಿಗಿಂತ ಶಕ್ತಿಶಾಲಿ’ (ಜಲಮೇವ ಯಸ್ಯ, ಬಲಮೇವ ತಸ್ಯ) ಎಂಬ ಧ್ಯೇಯವಾಕ್ಯ (ಮೋಟೊ) ಹೊಂದಿರುವ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್‌ ವಿರಾಟ್‌ ಈಗ ತನ್ನನ್ನು ಒಡೆಯುವ ಪ್ರಕ್ರಿಯೆಗೆ ಒಡ್ಡಿಕೊಂಡಿದೆ. ಮೊದಲು ಇಂಗ್ಲೆಂಡ್‌ನ ರಾಯಲ್‌ ನೇವಿ, ನಂತರ ಭಾರತದ ನೌಕಾಪಡೆ– ಹೀಗೆ ಒಟ್ಟಾರೆ 57 ವರ್ಷ ಅತೀ ದೀರ್ಘ ಕಾಲ ಸೇವೆ ಸಲ್ಲಿಸಿದ ಈ ಹೆಮ್ಮೆಯ ಯುದ್ಧನೌಕೆ, ಎರಡು ತಿಂಗಳ ಹಿಂದೆಯೇ ಹಡಗು ಒಡೆಯುವ ಕಟ್ಟೆಯಾಗಿರುವ ಗುಜರಾತ್‌ನ ಭಾವನಗರ ಜಿಲ್ಲೆಯ ಅಲಂಗ್‌ಸೇರಿಕೊಂಡಿದೆ.

ನೌಕಾಸೇನೆಯ ಮೊದಲ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ ಹಾದಿಯಲ್ಲಿ ‘ಗುಜರಿ’ಗೆ ಹೋಗುತ್ತಿರುವ ಎರಡನೇ ವಿಮಾನವಾಹಕ ಯುದ್ಧನೌಕೆ ಇದಾಗಿದೆ. ವಿರಾಟ್‌ನ ಹಳೆಯ ಹೆಸರು ಎಚ್‌ಎಂಎಸ್‌ (ಹರ್‌ ಮೆಜೆಸ್ಟಿ’ಸ್‌ ಶಿಪ್‌) ಹರ್ಮಿಸ್‌. ಆರು ವರ್ಷಗಳ ಹಿಂದೆ ಗುಜರಿ ಸೇರಿದ್ದ ಐಎನ್‌ಎಸ್‌ ವಿಕ್ರಾಂತ್‌ನ ಮೂಲ ಹೆಸರು ಎಚ್‌ಎಂಎಸ್‌ ಹರ್ಕ್ಯುಲಸ್‌. ಇದು ಇಂಗ್ಲೆಂಡ್‌ನಲ್ಲಿ ತಯಾರಾದರೂ 1957ರಲ್ಲಿ ಭಾರತ ಖರೀದಿಸಿದ ನಂತರ ಕೊಚ್ಚಿನ್‌ನ ನೌಕಾಯಾರ್ಡ್‌ನಲ್ಲಿ‌ ಸುಸಜ್ಜಿತ ರೂಪ ತಳೆಯಿತು.

ADVERTISEMENT

ಹಡಗು ಒಡೆಯುವ ಪ್ರಕ್ರಿಯೆ ಆರಂಭಿಸಲು ಸುಮಾರು ಎರಡು ತಿಂಗಳು ಹಿಡಿಯುತ್ತದೆ. ಪರಿಸರಕ್ಕೆ ಧಕ್ಕೆಯಾಗದಂತೆ 2009ರ ಹಾಂಗ್‌ಕಾಂಗ್‌ ಒಪ್ಪಂದಕ್ಕೆ ಅನುಗುಣವಾಗಿ ಈ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಭಾರತ 2010ರಲ್ಲಿ ಒಪ್ಪಂದಕ್ಕೆ ಸಹಿಹಾಕಿತ್ತು. ನಂತರ ಗುಜರಾತ್‌ನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗುಜರಾತ್‌ ಸಾಗರ ವ್ಯವಹಾರ ಮಂಡಳಿ ಅನುಮತಿಯೂ ಬೇಕು. ಇಂಧನ ಬರಿದುಮಾಡಬೇಕು. ಅಪಾಯಕಾರಿ ಅನಿಲಗಳಿದ್ದರೆ ಅವುಗಳನ್ನು ಎಚ್ಚರಿಕೆಯಿಂದ ವಿಲೇ ಮಾಡಬೇಕು. ಹಳೆಯ ಬ್ಯಾಟರಿಗಳನ್ನು ಕೂಡ. ಬೃಹದಾಕಾರದ ಹಡಗಿನ ಬಿಡಿಭಾಗಗಳು ಕಡಲಿನ ಪಾಲಾಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲವೂ ನಿಯಮಗಳಿಗೆ ಅನುಗುಣವಾಗಿರಬೇಕು.

ಸುಮಾರು 28,700 ಟನ್ ಭಾರದ, 743 ಅಡಿ ಉದ್ದದ ಈ ದೈತ್ಯ ನೌಕೆಯನ್ನು ಅಲಂಗ್‌ ಮೂಲದ ಶ್ರೀರಾಮ್‌ ಗ್ರೂಪ್‌ ಕಳೆದ ಆಗಸ್ಟ್‌ನಲ್ಲಿ ನಡೆದ ಆನ್‌ಲೈನ್‌ ಹರಾಜಿನಲ್ಲಿ ₹38.54 ಕೋಟಿ ಕೊಟ್ಟು ಖರೀದಿ ಮಾಡಿದೆ. ಒಡೆಯುವ ಪ್ರಕ್ರಿಯೆಯ ಪೂರ್ವಭಾವಿ ಕೆಲಸಗಳೂ ನಡೆದಿವೆ.

ಈ ನೌಕೆಯನ್ನು ಉಳಿಸುವಂತೆ ಇಂಗ್ಲೆಂಡ್‌ನ ಹರ್ಮಿಟ್‌ ವಿರಾಟ್‌ ಹೆರಿಟೇಜ್ ಟ್ರಸ್ಟ್‌ ಮನವಿ ಮಾಡಿತ್ತು. ಇಂಗ್ಲೆಂಡ್‌ಗೆ ಕಳುಹಿಸುವಂತೆಯೂ ಕೋರಿತ್ತು. ಇದನ್ನು ಕಡಲಿಗೆ ಸಂಬಂಧಿಸಿದ ವಿಷಯಗಳ ವಸ್ತು ಸಂಗ್ರಹಾಲಯ ಮಾಡುವಂತೆ ಒತ್ತಾಯಗಳೂ ಕೇಳಿಬಂದವು. ಕೆಲವು ದಿನಗಳ ಹಿಂದೆ, ವಿರಾಟ್‌ ಉಳಿಸುವಂತೆ ಶಿವಸೇನಾವು, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದಿತ್ತು. ‘ಈ ನೌಕೆ ಸಂರಕ್ಷಣೆಗೆ ಯೋಗ್ಯವಾಗಿದೆ. ಕೇಂದ್ರ ಸರ್ಕಾರ ಬಯಸಿದಲ್ಲಿ ಇದನ್ನು ಕಾಪಾಡಲು ಸಾಧ್ಯವಿದೆ’ ಎಂದು ಸಂಸದೆಯೂ ಆಗಿರುವ ಪಕ್ಷದ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿ ಹೇಳಿದ್ದರು.

ಇದನ್ನು ಗುಜರಿಗೆ ಹಾಕುವ ಯೋಚನೆ ಕಳೆದ ವರ್ಷವೇ ಬಲಬಂದಿತ್ತು. ನೌಕಾಪಡೆ ಜೊತೆ ಸಮಾಲೋಚಿಸಿ ಈ ಬಗ್ಗೆ ತೀರ್ಮಾನ ಮಾಡುವುದಾಗಿ ಕೇಂದ್ರ ಸರ್ಕಾರ, ಕಳೆದ ವರ್ಷದ ಜುಲೈನಲ್ಲಿ ಸಂಸತ್ತಿಗೆ ತಿಳಿಸಿತ್ತು.

ಎರಡನೇ ಮಹಾಯುದ್ಧದ ಸಮಯದಲ್ಲಿ ಈ ನೌಕೆಯ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಲಾಗಿತ್ತು. 1959ರಲ್ಲಿ ಈ ನೌಕೆಯನ್ನು ಎಚ್‌ಎಂಎಸ್‌ (his/ her majesty ship) ಹರ್ಮಿಸ್‌ ಹೆಸರಿನಲ್ಲಿ ಇಂಗ್ಲೆಂಡ್‌ನ ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು. 27 ವರ್ಷಗಳ ಸೇವೆಯ ನಂತರ ಈ ಬೃಹತ್‌ ನೌಕೆಯನ್ನು ಭಾರತ ಖರೀದಿಸಿ, ವಿರಾಟ್‌ ಎಂದು ಮರುನಾಮಕರಣ ಮಾಡಿತು. 30 ವರ್ಷಗಳ ದೀರ್ಘ ಸೇವೆಯ ನಂತರ ಇದನ್ನು ಅಂತಿಮವಾಗಿ 2017ರ ಮಾರ್ಚ್‌ನಲ್ಲಿ ಸೇವೆಯಿಂದ ಮುಕ್ತಗೊಳಿಸಲಾಯಿತು.

ಇದರ ಸೆಂಟಾರ್‌ ಕ್ಲಾಸ್‌ ದರ್ಜೆಯ ಈ ನೌಕೆಯ ಗರಿಷ್ಠ ವೇಗ ಗಂಟೆಗೆ 52 ಕಿ.ಮೀ.(28 ನಾಟ್‌). ಸೇವೆಯ ಅವಧಿಯಲ್ಲಿ ಈ ದೈತ್ಯ ನೌಕೆ ಮೂರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದೆ. ಅಪರೇಷನ್‌ ಜುಪಿಟರ್‌ (1989ರಲ್ಲಿ ಶಾಂತಿಪಾಲನಾ ಪಡೆಗಳನ್ನು ಶ್ರೀಲಂಕಾಕ್ಕೆ ರವಾನಿಸಿದ್ದು), ಅಪರೇಷನ್‌ ವಿಜಯ್‌ (1999ರ ಕಾರ್ಗಿಲ್‌ ಯುದ್ಧದ ವೇಳೆ ಪಾಕ್‌ ಬಂದರುಗಳಿಂದ ಪಡೆಗಳನ್ನು ತಡೆಯಲು ಬಳಕೆ) ಮತ್ತು ಅಪರೇಷನ್‌ ಪರಾಕ್ರಮ್‌ (2001–02) ಕಾರ್ಯಾಚಣೆಗಳಲ್ಲಿ ಭಾಗವಹಿಸಿತ್ತು. ವಿವಿಧ ರಾಷ್ಟ್ರಗಳ ಜೊತೆ ಜಂಟಿ ಸಮರಾಭ್ಯಾಸದಲ್ಲೂ ಈ ನೌಕೆ ತೊಡಗಿಕೊಂಡಿತ್ತು. ನೌಕಾಪಡೆ ಸೇರ್ಪಡೆ ನಂತರ ಒಟ್ಟು 5,90,000 ನಾಟಿಕಲ್‌ ಮೈಲ್‌ ಕ್ರಮಿಸಿದೆ.

ಇದಕ್ಕೆ ಮೊದಲು ವಿಕ್ರಾಂತ್‌, ಭಾರತದ ಮೊದಲ ವಿಮಾನವಾಹಕ ನೌಕೆಯಾಗಿ1961ರ ಮಾರ್ಚ್‌ನಲ್ಲಿ ನೌಕಾಪಡೆಯನ್ನು ಸೇರಿತ್ತು. 1997ರಲ್ಲಿ ಸೇವೆಯಿಂದ ಮುಕ್ತಗೊಳಿಸಿದ ನಂತರ ನೌಕೆಯನ್ನು ಮುಂದೇನು ಮಾಡಬೇಕೆಂಬ ಚರ್ಚೆಗಳು ನಡೆದವು. 2001ರಲ್ಲಿ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಲಾಯಿತು. ಮುಂಬೈನ ಕಫ್‌ ಪರೇಡ್‌ ಪ್ರದೇಶದಲ್ಲಿ 2012ರವರೆಗೆ ಇದು ಮ್ಯೂಸಿಯಂ ಆಗಿತ್ತು.

ಅಂತಿಮವಾಗಿ, ನಿರ್ವಹಣೆ ಕಷ್ಟವಾಗಿ ಇದನ್ನು ಹರಾಜು ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿತು. ಸುಪ್ರೀಂ ಕೋರ್ಟ್‌ ಅನುಮತಿ ನೀಡಿದ ನಂತರ, ಆನ್‌ಲೈನ್‌ ಹರಾಜಿನಲ್ಲಿ 2014ರ ನವೆಂಬರ್‌ನಲ್ಲಿ ಗುಜರಿಗೆ ಹಾಕಲಾಯಿತು. ಈ ಭಾರಿ ಗಾತ್ರದ ನೌಕೆಯ ಲೋಹದ ಭಾಗಗಳನ್ನು ಪುಣೆಯ ಬಜಾಜ್‌ ಆಟೊ ಕಂಪನಿ ಖರೀದಿಸಿತ್ತು. ಇವುಗಳನ್ನು ಕರಗಿಸಿ ಬಳಸಿದ, ಕಂಪನಿ, V-15 ಹೆಸರಿನ ಬೈಕ್‌ಗಳನ್ನು ಬಿಡುಗಡೆ ಮಾಡಿತ್ತು. ಪೆಟ್ರೋಲ್‌ ಟ್ಯಾಂಕ್‌ನ ಮೇಲೆ ಇದರ ಲಾಂಛನವನ್ನೂ ಬಳಸಿತ್ತು.

ವಿಶೇಷ ಎಂದರೆ ಕೆಲವು ಅಟೊಮೊಬೈಲ್‌ ಕಂಪನಿಗಳು ಈಗಾಗಲೇ ಶ್ರೀರಾಮ್‌ ಗ್ರೂಪ್‌ ಅನ್ನು ಸಂಪರ್ಕಿಸಿದ್ದು, ವಿರಾಟ್‌ ನೌಕೆಯ ಲೋಹವನ್ನು ಖರೀದಿಸಲು ಸಿದ್ಧವಿರುವುದಾಗಿ ಹೇಳಿಕೊಂಡಿವೆ. ದೇಶಾಭಿಮಾನ ಮೂಡಿಸುವ ತಂತ್ರವಾಗಿಯೂ ವಾಹನ ಉದ್ಯಮಗಳಿಗೆ ಇದು ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.