ADVERTISEMENT

‘ಬದುಕು ಮುಗಿಸುತ್ತಿರುವ ನಿರ್ಧಾರ ತಾರ್ಕಿಕವಾದುದು’; ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

ಪಿಟಿಐ
Published 3 ಫೆಬ್ರುವರಿ 2019, 8:55 IST
Last Updated 3 ಫೆಬ್ರುವರಿ 2019, 8:55 IST
   

ಹೈದರಾಬಾದ್‌: ಐಐಟಿ ಹೈದರಾಬಾದ್‌ನ 21 ವರ್ಷ ವಯಸ್ಸಿನ ವಿದ್ಯಾರ್ಥಿ ಹಾಸ್ಟೆಲ್‌ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶನಿವಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಕಂದರಾಬಾದ್‌ ಮೂಲದ ವಿದ್ಯಾರ್ಥಿ ಅನಿರುಧ್ಯ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಆಯತಪ್ಪಿ ಐಐಟಿ ಕ್ಯಾಂಪಸ್‌ ಹಾಸ್ಟೆಲ್‌ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದಿರಬಹುದು ಎಂದು ಮೊದಲು ಊಹಿಸಲಾಗಿತ್ತು.

ಆದರೆ, ತನಿಖೆ ಮುಂದುವರಿದಂತೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ಖಿನ್ನತೆಗೆ ಒಳಗಾಗಿದ್ದ ಅನಿರುಧ್ಯ, ಬದುಕು ಅಂತ್ಯಗೊಳಿಸಿ ಕೊಳ್ಳುತ್ತಿರುವುದಾಗಿ ತನ್ನ ಸ್ನೇಹಿತಿಗೆ ಸಂದೇಶ ಕಳುಹಿಸಿದ್ದ. ಗುರುವಾರ ನಡೆದಿದ್ದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ತನಿಖೆ ಕೈಗೊಂಡಿದ್ದರು.

ADVERTISEMENT

ಅನಿರುಧ್ಯ ಕಳುಹಿಸಿರುವ ಸಂದೇಶದಲ್ಲಿ ’ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ನಾನು ಮಾಡಿರುವ ಅಂದಾಜಿನ ಪ್ರಕಾರ, ಬದುಕನ್ನು ಕೊನೆಗೊಳಿಸಿಕೊಳ್ಳುವ ನನ್ನ ನಿರ್ಧಾರ ಸಂಪೂರ್ಣ ತಾರ್ಕಿಕವಾದುದಾಗಿದೆ. ಜೀವನದಲ್ಲಿ ಇನ್ನು ಆಸಕ್ತಿ ಉಳಿದಿಲ್ಲ ಹಾಗೂ ಸಮಯ ಕಳೆದಂತೆ ನಿತ್ಯದ ಕೆಲಸಗಳು ಮತ್ತಷ್ಟು ಕಠಿಣಗೊಳ್ಳುತ್ತಿವೆ’ ಎಂದು ಬರೆದಿದ್ದಾನೆ.

ಸಾಕಷ್ಟು ಚಿಂತಿಸಿದ ನಂತರವೇ ಕಳೆದ ವಾರ ಈ ಅಂತಿಮ ಆಲೋಚನೆ ಮಾಡಿರುವೆ ಎಂದು ಸಂದೇಶದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಮನಸ್ಥಿತಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ಅನಿರುಧ್ಯ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಿ ಬಂದಿದ್ದ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.