ADVERTISEMENT

ಪಿಎಂಸಿ ಬ್ಯಾಂಕ್‌ ಹಗರಣ: ಇ.ಡಿ.ಯಿಂದ ರಾಣಾ ಕಪೂರ್‌ ಬಂಧನ

ಪಿಟಿಐ
Published 27 ಜನವರಿ 2021, 15:51 IST
Last Updated 27 ಜನವರಿ 2021, 15:51 IST
ರಾಣಾ ಕಪೂರ್‌
ರಾಣಾ ಕಪೂರ್‌   

ನವದೆಹಲಿ: ಪಿಎಂಸಿ ಬ್ಯಾಂಕ್‌ ಸಾಲ ಹಗರಣದೊಂದಿಗೆ ತಳಕು ಹಾಕಿಕೊಂಡಿರುವ ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌ಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಸ್‌ ಬ್ಯಾಂಕ್‌ನ ಸಹ ಸಂಸ್ಥಾಪಕ ರಾಣಾ ಕಪೂರ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.

ಯೆಸ್‌ ಬ್ಯಾಂಕ್‌ನಲ್ಲಿ ಅವ್ಯವಹಾರ, ಲಂಚ ಪಡೆದ ಆರೋಪದಡಿ ಕಪೂರ್‌ ಅವರನ್ನು ಇ.ಡಿ ಈ ಹಿಂದೆಯೇ ಬಂಧಿಸಿದೆ. ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ಈಗ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಹೊಸ ಪ್ರಕರಣದಡಿ ಅವರನ್ನು ಬಂಧಿಸಿ, ಪಿಎಂಎಲ್ಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಅವರನ್ನು ಜ. 30ರ ವರೆಗೆ ಇ.ಡಿ ವಶಕ್ಕೆ ನೀಡಿ ಕೋರ್ಟ್‌ ಆದೇಶಿಸಿತು’ ಎಂದು ಇ.ಡಿ ಅಧಿಕಾರಿಗಳು ಬುಧವಾರ ತಿಳಿಸಿದರು.

ADVERTISEMENT

ಪಿಎಂಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ವಿವಾ ಗ್ರೂಪ್‌ನ ಪ್ರವರ್ತಕ ಹಾಗೂ ಬಹುಜನ ವಿಕಾಸ್‌ ಅಘಾಡಿಯ (ಬಿವಿಎ) ಮಹಾರಾಷ್ಟ್ರದ ಶಾಸಕ ಹಿತೇಂದ್ರ ಠಾಕೂರ್‌ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಮುಂಬೈ ಹಾಗೂ ಪಾಲ್ಘರ್‌ ಜಿಲ್ಲೆಯ ವಸೈ–ವಿರಾರ್‌ನಲ್ಲಿರುವ ಠಾಕೂರ್‌ ಅವರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿಯನ್ನೂ ನಡೆಸಿದ್ದರು. ಈಗ ಇದೇ ಸಾಲದ ಹಗರಣಕ್ಕೆ ಸಂಬಂಧಿಸಿ ರಾಣಾ ಕಪೂರ್‌ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.