ADVERTISEMENT

ಎಂಜಿನಿಯರ್‌ಗೆ ಕೆಸರು ಸುರಿದು ದೌರ್ಜನ್ಯ

ಅಧಿಕಾರಿ ಮೇಲೆ ಹಲ್ಲೆ: ಈಗ ಮಹಾರಾಷ್ಟ್ರದ ಶಾಸಕನ ಸರದಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:59 IST
Last Updated 4 ಜುಲೈ 2019, 19:59 IST
ಎಂಜಿನಿಯರ್‌ಗೆ ಕೆಸರು ಸುರಿದ ಹಲ್ಲೆ ಪಿಟಿಐ ಚಿತ್ರ
ಎಂಜಿನಿಯರ್‌ಗೆ ಕೆಸರು ಸುರಿದ ಹಲ್ಲೆ ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಹೆದ್ದಾರಿಯಲ್ಲಿ ಗುಂಡಿಗಳು ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕ ನಿತೇಶ್‌ ರಾಣೆ, ಕಿರಿಯ ಎಂಜಿನಿಯರ್‌ ಮೇಲೆ ಕೆಸರು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾದ ವಿಡಿಯೊ ಬಹಿರಂಗವಾಗಿದೆ.

ನಿತೇಶ್‌,ಕಣಕಾವಲಿ ನಗರಸಭೆಯ ಅಧ್ಯಕ್ಷ ಸಮೀರ್‌ ನಲವಾಡೆ ಮತ್ತು ಬೆಂಬಲಿಗರು ಕೃತ್ಯ ಎಸಗಿದ್ದಾರೆ. ಮಹಾರಾಷ್ಟ್ರದ ಕಣಕಾವಲಿ ಸಮೀಪ ಮುಂಬೈ–ಗೋವಾ ಹೆದ್ದಾರಿಯಲ್ಲಿ ಗುರುವಾರ ಈ ಘಟನೆ ನಡೆದಿದೆ.

ಎಂಜಿನಿಯರ್‌ ಅವರನ್ನು ಎಳೆದಾಡಿ, ಸೇತುವೆಯ ತಡೆಗೋಡೆ ಕಡೆಗೆ ಎಳೆದೊಯ್ದು ತಲೆಯ ಮೇಲೆ ಬಕೆಟ್‌ನಲ್ಲಿದ್ದ ಕೆಸರು ಸುರಿಯುತ್ತಿರುವುದು ಈ ವಿಡಿಯೊದಲ್ಲಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ADVERTISEMENT

ಹಲ್ಲೆಗೆ ಒಳಗಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಎಂಜಿನಿ ಯರ್ ಪ್ರಕಾಶ್‌ ಖೇಡೆಕರ್ ಅವರು ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 353ರ ಅನ್ವಯ ಸರ್ಕಾರಿ ನೌಕರರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಲಾಗಿದೆ.

‘ಈ ರಸ್ತೆಯಲ್ಲಿ ಹೋಗುವ ವಾಹನ ಚಾಲಕರು ನಿತ್ಯವೂ ದೂಳು ಕುಡಿಯುವ ಸ್ಥಿತಿ ಇದೆ. ನೀವು ಅದನ್ನು ಅನುಭವಿಸಿ’ ಎಂದು ರಾಣೆ ಮತ್ತು ನಲವಾಡೆ ರೇಗುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಬಿಜೆಪಿ ಶಾಸಕ ಆಕಾಶ್‌ ವಿಜಯವರ್ಗೀಯಇಂದೋರ್‌ನಲ್ಲಿ ಕೆಲದಿನಗಳ ಹಿಂದೆ ಕ್ರಿಕೆಟ್‌ ಬ್ಯಾಟ್‌ನಿಂದ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ನೆನಪಿನಿಂದ ಮಾಸುವ ಮುನ್ನವೇ ಈ ಘಟನೆ ನಡೆದಿದೆ.

ಶಾಸಕ ವಶಕ್ಕೆ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಪುತ್ರನೂ ಆಗಿರುವ, ಶಾಸಕ ನಿತೇಶ್‌ ವಿರುದ್ಧ ಪ್ರಕರಣ ದಾಖಲಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.