ADVERTISEMENT

ಇಂಗ್ಲಿಷ್ ಸಬಲೀಕರಣದ ಭಾಷೆ; ಅವಮಾನದ ಭಾಷೆಯಲ್ಲ: ರಾಹುಲ್ ಗಾಂಧಿ

ಪಿಟಿಐ
Published 20 ಜೂನ್ 2025, 11:19 IST
Last Updated 20 ಜೂನ್ 2025, 11:19 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ (ಪಿಟಿಐ): ‘ಇಂಗ್ಲಿಷ್‌ ನಮ್ಮನ್ನು ಸಬಲೀಕರಿಸುವ ಭಾಷೆಯೇ ಹೊರತು ನಾಚಿಕೆಪಡಿಸುವ ಭಾಷೆಯಲ್ಲ. ಹೀಗಾಗಿ ಅದನ್ನು ಪ್ರತಿ ಮಗುವಿಗೂ ಕಲಿಸಬೇಕು’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಪ್ರತಿಪಾದಿಸಿದ್ದಾರೆ.

ADVERTISEMENT

‘ಆದರೆ ಬಡ ಮಕ್ಕಳು ಇಂಗ್ಲಿಷ್‌ ಕಲಿಯುವುದು ಆರ್‌ಎಸ್‌ಎಸ್‌– ಬಿಜೆಪಿಗೆ ಬೇಕಿಲ್ಲ. ಏಕೆಂದರೆ, ಈ ಭಾಷೆಯನ್ನು ಕಲಿತರೆ ಅವರು ಪ್ರಶ್ನಿಸುತ್ತಾರೆ ಮತ್ತು ಸಮಾನತೆ ಪಡೆಯುತ್ತಾರೆ ಎಂಬುದೇ ಅವರ ಆತಂಕವಾಗಿದೆ’ ಎಂದು ರಾಹುಲ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಅವರು, ‘ಇಂಗ್ಲಿಷ್‌ ಮಾತನಾಡುವವರು ನಾಚಿಕೆಪಟ್ಟುಕೊಳ್ಳುವ ಕಾಲ ದೂರವಿಲ್ಲ’ ಎಂದು ಹೇಳಿಕೆ ನೀಡಿದ, ಮರು ದಿನ ರಾಹುಲ್‌ ಪ್ರತಿಕ್ರಿಯಿಸಿದ್ದಾರೆ.

‘ಇಂಗ್ಲಿಷ್‌ ಭಾಷೆ ಅಣೆಕಟ್ಟೆಯಲ್ಲ, ಬದಲಿಗೆ ಅದು ಸೇತುವೆ. ಇಂಗ್ಲಿಷ್‌ ಕಲಿತರೆ ನಾಚಿಕೆ ಆಗುವುದಿಲ್ಲ, ಬದಲಿಗೆ  ಸಬಲೀಕರಣ ಆಗುತ್ತದೆ. ಇಂಗ್ಲಿಷ್‌ ಭಾಷೆ ಸರಪಳಿಯಲ್ಲ, ಬದಲಿಗೆ ಅದು ಸರಪಳಿ ಭೇದಿಸುವ ಸಾಧನವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತೃಭಾಷೆಯಷ್ಟೇ ಇಂಗ್ಲಿಷ್‌ ಕೂಡ ಮುಖ್ಯ. ಅದು ಉದ್ಯೋಗ ಒದಗಿಸುವುದರ ಜತೆಗೆ ಆತ್ಮವಿಶ್ವಾಸವನ್ನೂ ವೃದ್ಧಿಸುತ್ತದೆ’ ಎಂದು ಅವರು ಹೇಳಿದ್ದಾರೆ.

‘ಸಮಾನತೆಗೆ ದಾರಿ’:   

‘ನಮ್ಮ ದೇಶದ ಪ್ರತಿ ಭಾಷೆಗೂ ಆತ್ಮ, ಸಂಸ್ಕೃತಿ, ಜ್ಞಾನವಿದೆ. ನಾವು ಅವುಗಳನ್ನು ಪೋಷಿಸಬೇಕು. ಅದರ ಜತೆಗೆ ಪ್ರತಿ ಮಗುವಿಗೂ ಇಂಗ್ಲಿಷ್‌ ಕಲಿಸಬೇಕು. ಸ್ಪರ್ಧಾ ಜಗತ್ತಿನಲ್ಲಿ ಪ್ರತಿ ಮಗುವಿಗೂ ಸಮಾನ ಅವಕಾಶ ಕಲ್ಪಿಸಲು ಇದು ಪ್ರಮುಖ ದಾರಿಯಾಗಿದೆ’ ಎಂದು ಅವರು ವಿವರಿಸಿದ್ದಾರೆ. 

‘ಬಿಜೆಪಿ ಸಚಿವರು ಮತ್ತು ಅವರ ಮಕ್ಕಳನ್ನು ಗಮನಿಸಿ. ಅವರೆಲ್ಲ ಅಧ್ಯಯನಕ್ಕೆ ಇಂಗ್ಲೆಂಡ್‌ಗೆ ಹೋಗುತ್ತಾರೆ. ಅವರಿಗೆ ಇಂಗ್ಲಿಷ್‌ ಒಂದು ಅಸ್ತ್ರ. ನೀವೂ ಇಂಗ್ಲಿಷ್‌ ಕಲಿತರೆ ಅಮೆರಿಕ, ಜಪಾನ್‌ ಸೇರಿದಂತೆ ಎಲ್ಲಿಗೆ ಬೇಕಾದರೂ ಹೋಗಬಹುದು. ಯಾವುದೇ ಕಂಪನಿಯಲ್ಲಿ ಕೆಲಸ ಮಾಡಬಹುದು’ ಎಂದು ಅವರು ತಿಳಿಸಿದ್ದಾರೆ. 

‘ಆದರೆ, ಇಂಗ್ಲಿಷ್‌ ಕಲಿಯಬೇಡಿ ಎಂದು ಬಿಜೆಪಿ– ಆರ್‌ಎಸ್‌ಎಸ್‌ ಹೇಳುತ್ತಿರುವುದರ ಹಿಂದೆ ಏನಿದೆ ಎಂಬುದು ತಿಳಿದಿದೆಯಾ?... ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ಬೋರ್ಡ್‌ ಕೊಠಡಿಗಳಲ್ಲಿ ನಿಮ್ಮ ಪ್ರವೇಶವನ್ನು ಅವರು ನೋಡಲು ಬಯಸುವುದಿಲ್ಲ. ಕೋಟ್ಯಂತರ ರೂಪಾಯಿ ವೇತನದ ಉದ್ಯೋಗಗಳು ನಿಮಗೆ ದೊರೆಯುವುದೂ ಅವರಿಗೆ ಬೇಕಿಲ್ಲ. ಪರಿಶಿಷ್ಟ ಸಮುದಾಯದ ಮಕ್ಕಳು ಪರಿಶಿಷ್ಟರ ವಿದ್ಯಾರ್ಥಿ ನಿಲಯಗಳಲ್ಲಿಯೇ ಇರಬೇಕು. ಅವರಿಗೆ ಮಹತ್ವದ ಅವಕಾಶಗಳ ಬಾಗಿಲು ಮುಚ್ಚಿರಬೇಕು ಎಂಬುದೇ ಅವರ ಉದ್ದೇಶವಾಗಿದೆ’ ಎಂದು ರಾಹುಲ್‌ ಗಾಂಧಿ ಆರೋಪ ಮಾಡಿದ್ದಾರೆ. 

ಇಂಗ್ಲಿಷ್‌ ಭಾರತದಾದ್ಯಂತ ಸಂಪರ್ಕ ಭಾಷೆಯಾಗಿದೆ.

ಜಾಗತಿಕ ಮಟ್ಟದಲ್ಲಿ ಪ್ರಯೋಜನ ಕಲ್ಪಿಸುವುದರ ಜತೆಗೆ ಅದು ಜನರ ಜ್ಞಾನವನ್ನು ಹೆಚ್ಚಿಸುತ್ತದೆ. ಇದನ್ನು ಮಾತನಾಡುವ ಭಾರತೀಯರು ನಾಚಿಕೆಪಡಬೇಕಾದ ಅಗತ್ಯವಿಲ್ಲ

- ಸಾಗರಿಕ ಘೋಷ್‌ ಟಿಎಂಸಿ ರಾಜ್ಯಸಭಾ ಸದಸ್ಯೆ 

ಯಾವುದೇ ಭಾಷೆ ಅಥವಾ ಉಪ ಭಾಷೆ ಮಾತನಾಡಿದರೆ ಹೇಗೆ ನಾಚಿಕೆಯಾಗುತ್ತದೆ. ಭಾಷೆಗಳ ನಡುವೆ ಸಹೋದರ ಸಂಬಂಧ ಸ್ಥಾಪಿಸಲು ನೆರವಾಗಬೇಕಾದದ್ದು ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರ ಕರ್ತವ್ಯ

-ಮನೋಜ್‌ ಕೆ. ಝಾ ಆರ್‌ಜೆಡಿ ಸಂಸದ

ಅಮಿತ್‌ ಶಾ ಅವರ ಹೇಳಿಕೆಯಲ್ಲಿ ದೇಶದ ಭಾಷೆಗಳ ಉನ್ನತೀಕರಿಸುವ ಉದ್ದೇಶವಿಲ್ಲ. ಬದಲಿಗೆ ಆರ್‌ಎಸ್‌ಎಸ್‌ನ ಹಿಂದಿ– ಹಿಂದೂ– ಹಿಂದೂಸ್ತಾನ ದೃಷ್ಟಿಕೋನಕ್ಕೆ ಅನುಗುಣವಾಗಿರದ ಪ್ರತಿ ಭಾಷೆಯನ್ನೂ ಅವಮಾನಿಸಿದಂತಿದೆ

-ಸಿಪಿಐ

ವಿವಿಧತೆಯಲ್ಲಿ ಏಕತೆ:

‘ಭಾರತದಲ್ಲಿ 22 ಭಾಷೆಗಳಿಗೆ ಸಾಂವಿಧಾನಿಕ ಮಾನ್ಯತೆಯಿದೆ. ದೇಶದ ಶೇ 97ರಷ್ಟು ಜನರು ಈ ಭಾಷೆಗಳನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಇವೇ ಅಲ್ಲದೆ 19500 ಭಾಷೆಗಳು ಮತ್ತು ಉಪ ಭಾಷೆಗಳನ್ನು ದೇಶ ಹೊಂದಿದೆ. ಇದು ನಮ್ಮ ಹೆಮ್ಮೆಯ ದೇಶದ ಹೊಂದಿರುವ ವಿವಿಧತೆಯಲ್ಲಿನ ಏಕತೆಯ ಲಕ್ಷಣವಾಗಿದೆ. ಆದರೆ ಇದು ಕೇಂದ್ರಕ್ಕೆ ಅರ್ಥವಾಗಿಲ್ಲ’ ಎಂದು ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡೆರಿಕ್‌ ಒಬ್ರಿಯಾನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.