ADVERTISEMENT

ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸು ಹೆಚ್ಚಳಕ್ಕೆ ಕೇಂದ್ರದ ಆಕ್ಷೇಪ

ಪಿಟಿಐ
Published 7 ಫೆಬ್ರುವರಿ 2024, 15:42 IST
Last Updated 7 ಫೆಬ್ರುವರಿ 2024, 15:42 IST
<div class="paragraphs"><p>ಸುಪ್ರೀಂ ಕೋರ್ಟ್ </p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಕಾರ್ಯಕ್ಷಮತೆಯ ಆಧಾರದಲ್ಲಿ ವಿಸ್ತರಿಸುವುದು ಕಾರ್ಯಸಾಧು ಅಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್ತಿನ ಸಮಿತಿಯೊಂದಕ್ಕೆ ತಿಳಿಸಿದೆ. ನಿವೃತ್ತಿ ವಯಸ್ಸನ್ನು ಈ ರೀತಿಯಲ್ಲಿ ಹೆಚ್ಚಿಸುವುದರಿಂದ ಸಂಸತ್ತಿನ ಅಧಿಕಾರವು ಇನ್ನಷ್ಟು ಕುಗ್ಗುತ್ತದೆ, ಅನಗತ್ಯವಾದ ಪಕ್ಷಪಾತಕ್ಕೆ ಇದು ದಾರಿ ಮಾಡಿಕೊಡಬಹುದು ಎಂದು ಕೂಡ ಕೇಂದ್ರ ವಿವರಿಸಿದೆ.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಈಗಿರುವುದಕ್ಕಿಂತ ಹೆಚ್ಚು ಮಾಡಲು ಕಾರ್ಯಕ್ಷಮತೆಯ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕಾನೂನು ಮತ್ತು ಸಿಬ್ಬಂದಿ ಕುರಿತ ಸಂಸತ್ತಿನ ಸ್ಥಾಯಿ ಸಮಿತಿಯು ಶಿಫಾರಸು ಮಾಡಿತ್ತು.

ADVERTISEMENT

ಈಗಿರುವ ನಿಯಮಗಳ ಪ್ರಕಾರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು 65ನೆಯ ವಯಸ್ಸಿಗೆ ನಿವೃತ್ತರಾಗುತ್ತಾರೆ, ಹೈಕೋರ್ಟ್‌ ನ್ಯಾಯಮೂರ್ತಿಗಳು 62ನೆಯ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ.

‘ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸನ್ನು ಹೆಚ್ಚು ಮಾಡುವ ಸಂದರ್ಭದಲ್ಲಿ, ಅವರ ಆರೋಗ್ಯ ಪರಿಸ್ಥಿತಿ, ಅವರು ನೀಡಿದ ತೀರ್ಪುಗಳ ಗುಣಮಟ್ಟ, ತೀರ್ಪುಗಳ ಸಂಖ್ಯೆಯನ್ನು ಆಧರಿಸಿ ಅವರ ಕಾರ್ಯಕ್ಷಮತೆಯ ಮರುಮೌಲ್ಯಮಾಪನ ಮಾಡಬಹುದು. ಇದಕ್ಕಾಗಿ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಒಂದು ವ್ಯವಸ್ಥೆಯನ್ನು ರೂಪಿಸಬಹುದು’ ಎಂದು ಬಿಜೆಪಿಯ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿಯು ಶಿಫಾರಸು ಮಾಡಿತ್ತು.

ಈ ಶಿಫಾರಸಿಗೆ ಉತ್ತರವಾಗಿ ಕೇಂದ್ರ ಸರ್ಕಾರವು, ನಿವೃತ್ತಿಯ ವಯಸ್ಸನ್ನು ಹೆಚ್ಚು ಮಾಡುವುದಕ್ಕೆ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಆಧರಿಸುವುದು ‘ಕಾರ್ಯಸಾಧು ಆಗಲಿಕ್ಕಿಲ್ಲ ಮತ್ತು ಉದ್ದೇಶಿತ ಫಲಿತಾಂಶವನ್ನು ಅದು ನೀಡದೆಯೂ ಇರಬಹುದು’ ಎಂದು ಹೇಳಿದೆ.

ಶಿಫಾರಸು ಜಾರಿಗೆ ಬಂದರೆ ‘ಸುಪ್ರೀಂ ಕೋರ್ಟ್‌ನ ಕೊಲಿಜಿಯಂಗೆ ನ್ಯಾಯಮೂರ್ತಿಗಳ ಮೌಲ್ಯ‍ಮಾಪನ ನಡೆಸಲು ಅಧಿಕಾರ ನೀಡಿದಂತಾಗುತ್ತದೆ. ಇದರಿಂದ ಸಂಸತ್ತಿನ ಅಧಿಕಾರವು ಇನ್ನಷ್ಟು ಕಡಿಮೆ ಆಗುತ್ತದೆ’ ಎಂದು ಕೇಂದ್ರ ಹೇಳಿದೆ. ಕೇಂದ್ರವು ನೀಡಿದ ಪ್ರತಿಕ್ರಿಯೆಯನ್ನು ಪರಿಗಣಿಸಿದ ನಂತರದಲ್ಲಿ ತಾನು ಶಿಫಾರಸಿನ ವಿಚಾರವಾಗಿ ಮುಂದಡಿ ಇರಿಸಲು ಬಯಸುವುದಿಲ್ಲ ಎಂದು ಸಮಿತಿ ಹೇಳಿದೆ. ಸಮಿತಿಯು ಇದನ್ನು ಲೋಕಸಭೆಗೆ ಬುಧವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.