ADVERTISEMENT

ಅಂಗವಿಕಲರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ: ದೆಹಲಿ ಸರ್ಕಾರಕ್ಕೆ ಆದೇಶ

ಪಿಟಿಐ
Published 30 ಜುಲೈ 2023, 14:33 IST
Last Updated 30 ಜುಲೈ 2023, 14:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ : ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಶೇ 5 ಮೀಸಲಾತಿ ನೀಡುವಂತೆ ನೋಡಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಂಗವಿಕಲರ ಹಕ್ಕುಗಳ ಕಾಯ್ದೆ– 2016 ಅಡಿ ಇದು ಅಧಿಕೃತ ಆದೇಶವಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ಜೊತೆಗೆ, ಕಾನೂನು ಪ್ರಕಾರ ಅಂಗವಿಕಲ ಅಭ್ಯರ್ಥಿಗಳಿಗೆ ಸೀಟು ಮೀಸಲಿಡಲು ಗುರುಗೋವಿಂದ್‌ ಸಿಂಗ್‌ ಇಂದ್ರಪ್ರಸ್ಥ ವಿಶ್ವವಿದ್ಯಾಲಯಕ್ಕೆ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ಅವರ ನೇತೃತ್ವದ ನ್ಯಾಯಪೀಠವು ಸೂಚಿಸಿದೆ.

ಅಂಗವಿಕಲರಿಗೆ ಈ ವಿಶ್ವವಿದ್ಯಾಲಯವು ಕಾನೂನಿನ ಪ್ರಕಾರ ಶೇ 5 ಮೀಸಲಾತಿ ನೀಡದೇ, ಶೇ 3 ಮೀಸಲಾತಿ ನೀಡುತ್ತಿದೆ ಎಂದು ಆರೋಪಿಸಿ ‘ಜಸ್ಟೀಸ್‌ ಫಾರ್ ಆಲ್‌’ ಎಂಬ ಸರ್ಕಾರೇತರ ಸಂಸ್ಥೆಯು (ಎನ್‌ಜಿಒ) ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು.

ADVERTISEMENT

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಎಲ್ಲಾ ಕೋರ್ಸ್‌ಗಳಲ್ಲೂ ಅಂಗವಿಕಲ ಅಭ್ಯರ್ಥಿಗಳಿಗೆ ವಿ.ವಿಯು ಶೇ.5 ಮೀಸಲಾತಿ ನೀಡುತ್ತಿತ್ತು. ಈ ವಿಚಾರದಲ್ಲಿ ಪುನಃ ಆದೇಶ ಹೊರಡಿಸುವ ಅಗತ್ಯವಿಲ್ಲ. ಎಲ್ಲಾ ವರ್ಗಗಳ ಅಂಗವಿಕಲ ಅಭ್ಯರ್ಥಿಗಳಿಗೆ ಸೀಟು ನೀಡಿ  ಮೀಸಲಿಟ್ಟಿರುವ ಸೀಟುಗಳು ಭರ್ತಿಯಾಗುವಂತೆ ದೆಹಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆದೇಶಿಸಿದೆ. 

ಮೀಸಲಾತಿಗೆ ಸಂಬಂಧಿಸಿ ಮೇ ತಿಂಗಳಲ್ಲಿ ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್‌, ಈ ಶೈಕ್ಷಣಿಕ ಸಾಲಿನಲ್ಲಿ ಅಂಗವಿಕಲರಿಗೆ ಶೇ 5 ಮೀಸಲಾತಿ ನೀಡುವಂತೆ ವಿ.ವಿಗೆ ಸೂಚಿಸಿತ್ತು. 

ಈ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು, ಮಧ್ಯಂತರ ಆದೇಶವನ್ನು ವಿ.ವಿ ಪಾಲಿಸಿಲ್ಲ ಎಂದೂ ಆರೋಪಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.