ADVERTISEMENT

ಕಾಶ್ಮೀರಕ್ಕೆ 16 ರಾಯಭಾರಿಗಳ ಭೇಟಿ

ವಸ್ತುಸ್ಥಿತಿ ತಿಳಿಸುವ ಉದ್ದೇಶ –ಕೇಂದ್ರ ಸರ್ಕಾರದ ಸ್ಪಷ್ಟನೆ

ಪಿಟಿಐ
Published 9 ಜನವರಿ 2020, 19:05 IST
Last Updated 9 ಜನವರಿ 2020, 19:05 IST
ಶ್ರೀನಗರದ ವಿಮಾನ ನಿಲ್ದಾಣದಲ್ಲಿ 16 ದೇಶಗಳ ರಾಯಭಾರಿಗಳು –ಪಿಟಿಐ ಚಿತ್ರ
ಶ್ರೀನಗರದ ವಿಮಾನ ನಿಲ್ದಾಣದಲ್ಲಿ 16 ದೇಶಗಳ ರಾಯಭಾರಿಗಳು –ಪಿಟಿಐ ಚಿತ್ರ   

ಶ್ರೀನಗರ: ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್ ಐ ಜಸ್ಟೆರ್ ಮತ್ತು ಇತರ 15 ರಾಷ್ಟ್ರಗಳ ರಾಯಭಾರಿಗಳಿದ್ದ ನಿಯೋಗ ಗುರುವಾರ ಎರಡು ದಿನಗಳ ಭೇಟಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಕಣಿವೆ ರಾಜ್ಯದಲ್ಲಿನ ವಸ್ತುಸ್ಥಿತಿಯ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಕಳೆದ ಆಗಸ್ಟ್‌ ತಿಂಗಳಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿದ ಕೇಂದ್ರದ ನಿರ್ಧಾರದ ಬಳಿಕ ನಡೆಯುತ್ತಿರುವ ರಾಜ
ತಾಂತ್ರಿಕರ ಪ್ರಥಮ ಭೇಟಿ ಇದಾಗಿದೆ.

ಕಾಶ್ಮೀರ ವಿಷಯ ಕುರಿತು ಪಾಕಿಸ್ತಾನದ ಅಪಪ್ರಚಾರವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇಂದ್ರ ಈ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ. ನಿಯೋಗ ಲೆಫ್ಟಿನಂಟ್ ಗವರ್ನರ್‌ ಜಿ.ಸಿ.ಮುರ್ಮು ಮತ್ತು ನಾಗರಿಕ ಸಮಾಜದ ಪ್ರಮುಖರ ಜೊತೆಗೂ ಚರ್ಚಿಸಲಿದೆ.

ADVERTISEMENT

ಅಮೆರಿಕ ರಾಯಭಾರಿಗಳ ಜತೆ ಬಾಂಗ್ಲಾದೇಶ, ವಿಯಟ್ನಾಂ, ನಾರ್ವೆ, ಮಾಲ್ಡೀವ್ಸ್, ದಕ್ಷಿಣ ಕೊರಿಯ, ಮೊರಾಕೊ, ನೈಜೀರಿಯದ ರಾಯಭಾರಿಗಳಿದ್ದಾರೆ. ಹಿರಿಯ ಅಧಿಕಾರಿಗಳು ನಿಯೋಗಕ್ಕೆ ಮಾಹಿತಿ ಒದಗಿಸಿದರು.

ಕೇಂದ್ರದ ಇಬ್ಬಗೆಯ ಧೋರಣೆ: ಪ್ರತಿಪಕ್ಷಗಳ ಟೀಕೆ

ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿವಿಧ ದೇಶಗಳ ರಾಯಭಾರಿಗಳ ನಿಯೋಗದ ಭೇಟಿಗೆ ಅವಕಾಶವನ್ನು ಕಲ್ಪಿಸುವ ಕೇಂದ್ರ, ಇನ್ನೊಂದೆಡೆ ದೇಶದ ರಾಜಕಾರಣಿಗಳಿಗೆ ಪ್ರವೇಶ ನಿರ್ಬಂಧಿಸುವ ಇಬ್ಬಗೆ ಧೋರಣೆ ತಳೆದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

‘ಕೇಂದ್ರ ಸರ್ಕಾರ ದ್ವಿಮುಖ ಧೋರಣೆಯನ್ನು ತಳೆದಿದೆ. ಭಾರತದ ರಾಜಕಾರಣಿಗಳಿಗೂ ಭೇಟಿ ನೀಡಲು ಅವಕಾಶ ಕಲ್ಪಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ ಆಗ್ರಹಿಸಿದ್ದಾರೆ.

ನ್ಯಾಷನಲ್‌ ಕಾನ್ಫರೆನ್ಸ್‌ ಅಸಮಾಧಾನ: ಕಣಿವೆ ರಾಜ್ಯ ದಲ್ಲಿ ಸಹಜ ಪರಿಸ್ಥಿತಿಯಿದೆ ಎಂಬ ತನ್ನ ಪ್ರತಿಪಾದನೆಯ ಸಾಬೀತಿಗಾಗಿ ರಾಯಭಾರಿಗಳ ಭೇಟಿ ಮಾಡಿಸಲಾಗುತ್ತಿದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ವಿಷಾದಿಸಿದೆ.

‘ಧೈರ್ಯವಿದ್ದರೆ ಮುಖಂಡರ ಭೇಟಿಗೆ ಅವಕಾಶ ಕಲ್ಪಿಸಿ’: ‘ರಾಯಭಾರಿಗಳ ಭೇಟಿ ಜಮ್ಮು ಮತ್ತು ಕಾಶ್ಮೀರದಲ್ಲಿ ತಾನೇ ನಿರ್ಮಿಸಿದ ‘ಸಹಜ ಸ್ಥಿತಿ’ ಸ್ಥಿರೀಕರಿಸುವ ಯತ್ನ’ ಎಂದು ಪಿಡಿಪಿ ಟೀಕಿಸಿದೆ.

ವಸ್ತುಸ್ಥಿತಿ ಪ್ರತ್ಯಕ್ಷ ಗಮನಿಸಲು ಭೇಟಿ:ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ರಾಯಭಾರಿಗಳ ನಿಯೋಗದ ಭೇಟಿಯ ಉದ್ದೇಶ ಕಾಶ್ಮೀರದ ವಸ್ತುಸ್ಥಿತಿಯನ್ನು ಪ್ರತ್ಯಕ್ಷವಾಗಿ ಗಮನಿಸಲಿ ಎಂಬುದೇ ಆಗಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

‘ಸರ್ಕಾರ ಈ ಭೇಟಿಗೆ ಸಹಕಾರ ನೀಡಿದೆ. ನಿಯೋಗವು ಅಲ್ಲಿ ಭದ್ರತಾ ಅಧಿಕಾರಿಗಳು, ರಾಜಕೀಯ ಮುಖಂಡರು, ಸಮಾಜದ ಪ್ರಮುಖರು, ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡುವರು’ ಎಂದುವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್ ತಿಳಿಸಿದ್ದಾರೆ.

‘ಐರೋಪ್ಯ ದೇಶಗಳ ರಾಯಭಾರಿಗಳೂ ಭೇಟಿಗೆ ಬಯಸಿದ್ದರು. ಆದರೆ, ಎಲ್ಲರಿಗೂ ಸರ್ಕಾರ ಈಗ ಆಹ್ವಾನ ನೀಡರಲಿಲ್ಲ’ ಎಂದೂ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.