ADVERTISEMENT

ಇ–ಸಂಜೀವಿನಿ: ಮೂರು ಲಕ್ಷ ಮಂದಿಗೆ ಆರೋಗ್ಯ ಸೇವೆ

ಪಿಟಿಐ
Published 8 ಸೆಪ್ಟೆಂಬರ್ 2020, 13:07 IST
Last Updated 8 ಸೆಪ್ಟೆಂಬರ್ 2020, 13:07 IST
ಇ–ಸಂಜೀವಿನಿ ಆ್ಯಪ್
ಇ–ಸಂಜೀವಿನಿ ಆ್ಯಪ್   

ನವದೆಹಲಿ: ಆರೋಗ್ಯ ಸಚಿವಾಲಯ ಆರಂಭಿಸಿರುವ ಇ–ಸಂಜೀವಿನಿ ಯೋಜನೆ‌ ಮೂಲಕ ಒಟ್ಟು ಮೂರು ಲಕ್ಷ ಮಂದಿ ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಟೆಲಿಮೆಡಿಸಿನ್‌ ಸೇವೆ ಎರಡು ವಿಧದಲ್ಲಿ ಲಭ್ಯವಿದೆ. ಮೊದಲನೆಯದ್ದು ವೈದ್ಯರಿಂದ ವೈದ್ಯರಿಗೆ (ಇ–ಸಂಜೀವಿನಿ), ಎರಡನೇಯದ್ದು ರೋಗಿಯಿಂದ ವೈದ್ಯರಿಗೆ (ಇ–ಸಂಜೀವಿನಿ ಒಪಿಡಿ).

ಆಗಸ್ಟ್‌ 9ರ ವೇಳೆಗೆಟೆಲಿಮೆಡಿಸಿನ್‌ ಸೇವೆಯು 1.5 ಲಕ್ಷ ಜನರನ್ನು ತಲುಪಿದ್ದು, ಇದೊಂದು ಮೈಲುಗಲ್ಲು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಸಂತಸ ವ್ಯಕ್ತಪಡಿಸಿದ್ದರು. ನಂತರದ ಒಂದು ತಿಂಗಳೊಳಗೆ ಈ ಸಂಖ್ಯೆಯು ದ್ವಿಗುಣವಾಗಿದೆ. ಹಿಂದಿನ 20 ದಿನಗಳಲ್ಲಿ ಒಂದು ಲಕ್ಷ ಮಂದಿ ಇ ಸಂಜೀವಿನಿ ಮೂಲಕ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ADVERTISEMENT

ವೈದ್ಯರಿಂದ ವೈದ್ಯರಿಗೆ ಇ–ಸಂಜೀವಿನಿ ಸೇವೆಯು ಆಯುಷ್ಮಾನ್‌ ಭಾರತ್‌ ಯೋಜನೆಯ ತಳಹದಿ ಎಂದು ಸಚಿವಾಲಯ ಹೇಳಿದೆ.

‘ಕೋವಿಡ್‌–19ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಸಮಯದಲ್ಲಿ ರೋಗಿಗಳಿಗೆ ಅಗತ್ಯ ಸಲಹೆ ಹಾಗೂ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ವರ್ಷದ ಏಪ್ರಿಲ್‌ 13ರಂದು ಇ– ಸಂಜೀವಿನಿ ಒಪಿಡಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಸದ್ಯ 23 ರಾಜ್ಯಗಳಲ್ಲಿ ಇ–ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಉಳಿದ ರಾಜ್ಯಗಳೂ ಈ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ’ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ತಮಿಳುನಾಡು ರಾಜ್ಯವೊಂದರಲ್ಲೇ 97,204 ಮಂದಿ ಇ–ಸಂಜೀವಿನಿ ಒಪಿಡಿ ಆ್ಯಪ್‌ ಮೂಲಕ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ (65,173) ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.