ನವದೆಹಲಿ: ದೇಶದಾದ್ಯಂತ ‘ಇಎಸ್‌ಐ‘ ಸೌಲಭ್ಯವನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಉದ್ಯೋಗಿಗಳು ಮತ್ತು ಉದ್ಯೋಗದಾತ ಕಂಪನಿಗಳ ನೋಂದಣಿ ಪ್ರೋತ್ಸಾಹಿಸುವ ನವೀಕೃತ ಯೋಜನೆಯನ್ನು (ಎಸ್‌ಪಿಆರ್‌ಇಇ) ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಪ್ರಕಟಿಸಿದೆ.
ಶಿಮ್ಲಾದಲ್ಲಿ ಶುಕ್ರವಾರ ‘ಇಎಸ್‌ಐಸಿ’ಯ 196ನೇ ಸಭೆಯ ಬಳಿಕ ಕೇಂದ್ರ ಕಾರ್ಮಿಕ ಸಚಿವ ಮನ್‌ಸುಖ್ ಮಾಂಡವೀಯ ನವೀಕೃತ ಯೋಜನೆ ಪ್ರಕಟಿಸಿದರು.
2016ರಲ್ಲಿ ಜಾರಿಗೊಳಿಸಲಾದ ಈ ಯೋಜನೆಯಡಿ ಇದುವರೆಗೆ 88 ಸಾವಿರ ಕಂಪನಿಗಳು ಮತ್ತು 1.02 ಕೋಟಿ ಉದ್ಯೋಗಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನವೀಕೃತ ಯೋಜನೆಯಡಿ ಇನ್ನೂ ನೋಂದಣಿ ಮಾಡಿಕೊಳ್ಳದ ಕಂಪನಿಗಳು, ಅರ್ಧಕ್ಕೆ ಕೆಲಸ ತೊರೆದಿರುವ ತಾತ್ಕಾಲಿಕ, ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ನೋಂದಣಿಗೆ ಅವಕಾಶ ಲಭಿಸಲಿದೆ. ನೋಂದಣಿ ಮಾಡಿಕೊಂಡ ದಿನದಿಂದ ಉದ್ಯೋಗಿಗಳು ಇಎಸ್‌ಐ ಸೌಲಭ್ಯದ ವ್ಯಾಪ್ತಿಗೆ ಬರಲಿದ್ದಾರೆ. ನೋಂದಣಿಯ ಅವಧಿ 2025ರ ಜುಲೈ 1ರಿಂದ ಡಿಸೆಂಬರ್ 31 ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಚಾರಿಟಬಲ್ ಆಸ್ಪತ್ರೆ ಸಹಯೋಗ: ಇಎಸ್ಐ ಆಸ್ಪತ್ರೆಗಳು ಇಲ್ಲದ ಕಡೆಗಳಲ್ಲಿ, ಚಾರಿಟಬಲ್ ಆಸ್ಪತ್ರೆಗಳ ಸಹಯೋಗದಲ್ಲಿ ‘ಇಎಸ್‌ಐ’ ಫಲಾನುಭವಿಗಳಿಗೆ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗುವುದು. ದೇಶದ ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಇಎಸ್‌ಐಸಿ ಹೇಳಿದೆ.
ಪರಿಷ್ಕೃತ ಆಯುಷ್ ನೀತಿಗೂ ಇಎಸ್‌ಐಸಿ ಒಪ್ಪಿಗೆ ನೀಡಿದೆ. ‘ಇಎಸ್‌ಐ’ ಆಸ್ಪತ್ರೆಗಳಲ್ಲಿ ಯೋಗ, ಯುನಾನಿ, ಸಿದ್ಧ, ಹೋಮಿಯೊಪತಿ ಚಿಕಿತ್ಸಾ ಸೌಲಭ್ಯ ಸಿಗಲಿದೆ.
‘ಕ್ಷಮಾದಾನ ಯೋಜನೆ –2025’
ಕಾರ್ಮಿಕರ ರಾಜ್ಯ ವಿಮಾ ನಿಗಮವು ‘ಕ್ಷಮಾದಾನ ಯೋಜನೆ 2025’ಕ್ಕೂ ಅನುಮೋದನೆ
ನೀಡಿದೆ. 2025ರ ಅಕ್ಟೋಬರ್ 1ರಿಂದ 2026ರ ಸೆಪ್ಟೆಂಬರ್ 30ರವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ.
ಉದ್ಯೋಗಿಗಳು ಮತ್ತು ಉದ್ಯೋಗದಾತ ಕಂಪನಿಗಳು ‘ಇಎಸ್‌ಐ’ ಸಂಬಂಧಿತ ಪ್ರಕರಣ ಗಳನ್ನು ಈ ಯೋಜನೆಯಡಿ ಒಂದೇ ಬಾರಿಗೆ ಇತ್ಯರ್ಥಪಡಿಸಿಕೊಳ್ಳ ಬಹುದು. ರಾಜಿ ಸಂಧಾನಕ್ಕೂ ಅವಕಾಶ ಇದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.