ADVERTISEMENT

ಅಹಮದಾಬಾದ್ | ವಿಚ್ಛೇದನ ಅರ್ಜಿಗೆ ಕೋಪ: ಬಾಂಬ್ ಕಳುಹಿಸಿದ ಭೂಪ!

ಏಜೆನ್ಸೀಸ್
Published 21 ಡಿಸೆಂಬರ್ 2024, 15:41 IST
Last Updated 21 ಡಿಸೆಂಬರ್ 2024, 15:41 IST
   

ಅಹಮದಾಬಾದ್: ಪಾರ್ಸೆಲ್ ಮೂಲಕ ರವಾನಿಸಿದ್ದ ಬಾಂಬ್ ಸ್ಫೋಟಿಸಿದ ಪರಿಣಾಮವಾಗಿ ಪಾರ್ಸೆಲ್ ನೀಡಲು ಬಂದಿದ್ದ ವ್ಯಕ್ತಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

ವಿಚ್ಛೇದನ ಕೋರಿ ಪತ್ನಿಯು ಅರ್ಜಿ ಸಲ್ಲಿಸಿದ್ದರಿಂದ ಸಿಟ್ಟಿಗೆದ್ದ, ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯ ವ್ಯಕ್ತಿಯೊಬ್ಬ ಕಳುಹಿಸಿದ್ದ ಪಾರ್ಸೆಲ್ ಇದಾಗಿತ್ತು. ಇದರಲ್ಲಿ ಮನೆಯಲ್ಲೇ ತಯಾರಿಸಿದ ಬಾಂಬ್ ಇತ್ತು ಎಂದು ಪೊಲೀಸರು ಹೇಳಿದ್ದಾರೆ.‌

ಸಾಬರಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಐಒಸಿ ರಸ್ತೆಯಲ್ಲಿನ ಮನೆಯೊಂದರಲ್ಲಿ ಬೆಳಿಗ್ಗೆ 10.45ರ ಸುಮಾರಿಗೆ ಭಾರಿ ಸ್ಫೋಟ ಕೇಳಿಸಿತು. ಪಾರ್ಸೆಲ್ ತಂದಿದ್ದ ಗೌರವ್ ಗಾಧ್ವಿ ಅವರು ಕಿರೀಟ್ ಸುಖಾಡಿಯಾ ಎನ್ನುವವರಿಗೆ ಪಾರ್ಸೆಲ್ ನೀಡುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಇಬ್ಬರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಾಂಬ್‌ ಬಳಸಿ ಕಿರೀಟ್‌ ಅವರ ಸಹೋದರ ಬಲದೇವ್ ಅವರಿಗೆ ಹಾನಿ ಉಂಟುಮಾಡುವುದು ಬಾಂಬ್ ರವಾನಿಸಿದ ವ್ಯಕ್ತಿಯ ಉದ್ದೇಶವಾಗಿತ್ತು. ಆದರೆ ಬಲದೇವ್ ಅವರಿಗೆ ಹಾನಿ ಆಗಿಲ್ಲ ಎಂದು ಪೊಲೀಸರು ಹೇಳಿದರು.‌ ಬಲದೇವ್ ಅವರು ಪಾರ್ಸೆಲ್ ಸ್ವೀಕರಿಸಲು ನಿರಾಕರಿಸಿದ್ದರು.

ಸುರೇಶ್‌ಭಾಯಿ ಎನ್ನುವ ವ್ಯಕ್ತಿ ಈ ಪಾರ್ಸೆಲ್ ಕಳುಹಿಸಿದ್ದಾರೆ ಎಂದು ಅದನ್ನು ನೀಡಲು ಬಂದಿದ್ದ ಗೌರವ್ ಹೇಳಿದ್ದರು. ಬಲದೇವ್ ಮತ್ತು ಗೌರವ್ ನಡುವೆ ಮಾತು ನಡೆಯುತ್ತಿದ್ದಾಗ ಬಾಂಬ್ ಸ್ಫೋಟಿಸಿತು. ಆಗ ಅಲ್ಲಿಯೇ ಇದ್ದ ಕಿರೀಟ್‌ ಅವರಿಗೆ ಗಾಯಗಳಾದವು. ಸ್ಫೋಟದ ಪರಿಣಾಮಕ್ಕೆ ಗೌರವ್ ಅವರ ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಭಾರಿ ಸ್ಫೋಟದ ಪರಿಣಾಮವಾಗಿ ಕೆಲವು ಹೊತ್ತು ತಮಗೆ ಕಣ್ಣು ಕಾಣಿಸದಂತೆ ಆಗಿತ್ತು ಎಂದು ಬಲದೇವ್ ತಿಳಿಸಿದ್ದಾರೆ.

ರುಪೇನ್ ಬರೋಟ್ ಎನ್ನುವ ವ್ಯಕ್ತಿ ಈ ಪಾರ್ಸೆಲ್ ಕಳುಹಿಸಿದ್ದ. ಪತ್ನಿಯು ಹತ್ತು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಈತನ ಕೋಪಕ್ಕೆ ಕಾರಣ ಎಂದು ಪೊಲೀಸ್ ಜಂಟಿ ಆಯುಕ್ತ ನೀರಜ್ ಬಡಗುಜರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಪತ್ನಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವಂತೆ ಪ್ರಚೋದನೆ ನೀಡಿದ್ದು ಬಲದೇವ್ ಎಂಬ ಅನುಮಾನ ರುಪೇನ್‌ಗೆ ಇದೆ. ಕಳ್ಳಭಟ್ಟಿ ತಯಾರಿಕೆಗೆ ಸಂಬಂಧಿಸಿದ ಹಲವು ಪ್ರಕರಣಗಳು ರುಪೇನ್ ವಿರುದ್ಧ ದಾಖಲಾಗಿವೆ. ಅಲ್ಲದೆ, ಸಮಾಜ ವಿರೋಧಿ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ ಅಡಿಯಲ್ಲಿಯೂ ಹಲವು ಪ್ರಕರಣಗಳನ್ನು ರುಪೇನ್ ವಿರುದ್ಧ ದಾಖಲಿಸಲಾಗಿದೆ’ ಎಂದು ಅವರು ಹೇಳಿದರು.

ರುಪೇನ್ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿ ಬಾಂಬ್ ಹಾಗೂ ನಾಡಬಂದೂಕು ತಯಾರಿಕೆಯ ಸಣ್ಣ ಘಟಕ ಇರುವುದನ್ನು ಪತ್ತೆ ಮಾಡಿದ್ದಾರೆ. ಅಕ್ರಮವಾಗಿ ಬಾಂಬ್ ಮತ್ತು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ರುಪೇನ್ ತೊಡಗಿದ್ದ ಎಂಬುದನ್ನು ಹೇಳುವ ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.