ADVERTISEMENT

ಸ್ವಜನ ಪಕ್ಷಪಾತದ ವಿಷ ವರ್ತುಲದಲ್ಲಿ ಕಾಂಗ್ರೆಸ್‌: ಪ್ರಧಾನಿ ಮೋದಿ ವಾಗ್ದಾಳಿ

ದೇಶಕ್ಕೆ ಹಾನಿಯಾಗುವಂತಿದ್ದರೂ ನನ್ನನ್ನು ವಿರೋಧಿಸುವುದೇ ಅವರ ಕಾರ್ಯಸೂಚಿ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 12:51 IST
Last Updated 16 ಫೆಬ್ರುವರಿ 2024, 12:51 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಜೈಪುರ: ‘ಕಾಂಗ್ರೆಸ್‌ ಪಕ್ಷ ಸ್ವಜನಪಕ್ಷಪಾತ ಮತ್ತು ಕುಟುಂಬ ರಾಜಕಾರಣ ಎಂಬ ವಿಷ ವರ್ತುಲದಲ್ಲಿ ಸಿಲುಕಿದೆ. ಹೀಗಾಗಿ ಪ್ರತಿಯೊಬ್ಬರು ಆ ಪಕ್ಷವನ್ನು ತೊರೆಯುತ್ತಿದ್ದಾರೆ’ ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

‘ಮೋದಿಯನ್ನು ವಿರೋಧಿಸುವುದೊಂದೇ ಕಾಂಗ್ರೆಸ್‌ನ ಕಾರ್ಯಸೂಚಿ. ನಾನು ಏನು ಮಾಡುತ್ತೇನೋ ಅದಕ್ಕೆ ವಿರುದ್ಧವಾದುದನ್ನೇ ಕಾಂಗ್ರೆಸ್‌ ಮಾಡುತ್ತದೆ. ಅದು, ದೇಶಕ್ಕೇ ಹಾನಿಯಾಗುವಂತಹ ಕೆಲಸವಾದರೂ ಸರಿ, ಅದನ್ನೇ ಮಾಡುತ್ತದೆ’ ಎಂದು ಟೀಕಿಸಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ‘ವಿಕಸಿತ ಭಾರತ, ವಿಕಸಿತ ರಾಜಸ್ಥಾನ’ ಕಾರ್ಯಕ್ರಮ ಉದ್ದೇಶಿಸಿ ವರ್ಚುವಲ್‌ ಆಗಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಅವರು, ₹17 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ADVERTISEMENT

‘ಮೋದಿಯನ್ನು ವಿರೋಧಿಸುವುದೇ ಕಾಂಗ್ರೆಸ್‌ನ ಏಕೈಕ ಕಾರ್ಯಸೂಚಿ. ಮೋದಿ ವಿರುದ್ಧ ಅವರು ಎಂತಹ ವಿಷಯಗಳನ್ನು ಹಬ್ಬಿಸುತ್ತಿದ್ದಾರೆ ಅಂದರೆ, ಅದರಿಂದ ಸಮಾಜ ವಿಭಜನೆಗೊಳ್ಳುತ್ತದೆ. ಯಾವಾಗ ಒಂದು ಪಕ್ಷ ಸ್ವಜನಪಕ್ಷಪಾತ ಮತ್ತು ಕುಟುಂಬ ರಾಜಕಾರಣ ಎನ್ನುವ ವಿಷ ವರ್ತುಲದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆಯೋ ಆಗ ಇಂಥದ್ದೆಲ್ಲ ನಡೆಯುತ್ತದೆ’ ಎಂದು ಮೋದಿ ಹೇಳಿದರು.

‘ದೂರದೃಷ್ಟಿ ಇಲ್ಲದಿರುವುದೇ ಕಾಂಗ್ರೆಸ್‌ನ ಸಮಸ್ಯೆ. ಆ ಪಕ್ಷಕ್ಕೆ ಭವಿಷ್ಯದ ಬಗ್ಗೆ ಮುಂಗಾಣ್ಕೆ ಇಲ್ಲ ಅಥವಾ ಯಾವುದೇ ಆಲೋಚನೆಯೂ ಇಲ್ಲ’ ಎಂದರು.

ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮ ಮಾತನಾಡಿದರು. 200 ಸ್ಥಳಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಚಿವರು, ಸಂಸದರು, ಶಾಸಕರು ಹಾಗೂ ಇತರ ಚುನಾಯಿತ ಪ್ರತಿನಿಧಿಗಳು ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆಯೋಜಿಸಿದ್ದ ‘ವಿಕಸಿತ ಭಾರತ ವಿಕಸಿತ ರಾಜಸ್ಥಾನ’ ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುವಲ್‌ ಆಗಿ ಮಾತನಾಡಿದರು –ಪಿಟಿಐ ಚಿತ್ರ 
ಮೋದಿ ಕುರಿತು ಯಾರು ಹೆಚ್ಚು ನಿಂದನೆ ಮಾಡುತ್ತಾರೋ ಅಂಥವರಿಗೆ ಕಾಂಗ್ರೆಸ್‌ ಪಕ್ಷ ಭಾರಿ ಸ್ವಾಗತ ಕೋರುತ್ತದೆ
- ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.