ADVERTISEMENT

ಹಿಜಾಬ್ ತೀರ್ಪು: ಪ್ರತಿಯೊಬ್ಬರೂ ನೆಲದ ಕಾನೂನನ್ನು ಗೌರವಿಸಬೇಕು– ಶೋಭಾ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 14:20 IST
Last Updated 15 ಮಾರ್ಚ್ 2022, 14:20 IST
   

ನವದೆಹಲಿ: ಮುಸ್ಲಿಂ ಸಮುದಾಯದ ಬಡ ಮಹಿಳೆಯರನ್ನೇ ಗುರಿಯಾಗಿರಿಸಿ, ಹಿಜಾಬ್‌ ಧರಿಸುವಂತೆ ಪ್ರೇರೇಪಿಸಿ ಅವರನ್ನು ಶೋಷಿಸಲಾಗುತ್ತಿದೆ ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ದೂರಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಪ್ರಕರಣ ಕುರಿತು ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರತಿಯೊಬ್ಬರೂ ಸ್ವಾಗತಿಸಬೇಕು. ಈ ನೆಲದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಕೋರಿದರು.

ಶ್ರೀಮಂತ ಮುಸ್ಲಿಮರು ತಮ್ಮ ಮನೆಯ ಮಹಿಳೆಯರನ್ನು ಯಾವುದೇ ರೀತಿಯ ಕಟ್ಟುಪಾಡುಗಳಿಗೆ ಒಳಪಡಿಸದೇ, ಕೇವಲ ಬಡ ಮಹಿಳೆಯರನ್ನು ಪ್ರಚೋದಿಸುತ್ತಿದ್ದಾರೆ. ಇದಕ್ಕೆ ಬಲಿಯಾಗುತ್ತಿರುವ ಬಡ ಮುಸ್ಲಿಂ ಮಹಿಳೆಯರು ಹಿಂದುಳಿಯುವಂತಾಗಿದೆ. ಮುಸ್ಲಿಂ ಮಹಿಳೆಯರು ಇದಕ್ಕೆ ಸೊಪ್ಪು ಹಾಕದೇ, ಉತ್ತಮ ಶಿಕ್ಷಣ ಪಡೆದು ಅಭಿವೃದ್ಧಿಯತ್ತ ಸಾಗಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಎಲ್‌.ಕೆ.ಜಿ, ಯು.ಕೆ.ಜಿ ಕಲಿಯುತ್ತಿರುವ ಚಿಕ್ಕಚಿಕ್ಕ ಹೆಣ್ಣು ಮಕ್ಕಳನ್ನೂ ಬಿಡದೇ, ಧರ್ಮದ ಹೆಸರಲ್ಲಿ ಅವರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ. ಧರ್ಮವು ಹಿಜಾಬ್‌ ಧರಿಸುವಂತೆ ತಿಳಿಸಿಲ್ಲ. ಈ ನಿಟ್ಟಿನಲ್ಲಿ ಕೆಟ್ಟ ಅಭ್ಯಾಸವನ್ನು ಕೈಬಿಡಬೇಕು ಎಂದು ಅವರು ಮನವಿ ಮಾಡಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಸೆಯಿಂದ ಹಿಜಾಬ್‌ ಪ್ರಕರಣ ಮುನ್ನಲೆಗೆ ಬಂದಿದೆ. ಕೆಲವು ಸಂಘಟನೆಗಳು ಬಿತ್ತಿದ ದ್ವೇಷಕ್ಕೆ ಶಿವಮೊಗ್ಗದಲ್ಲಿ ಹರ್ಷ ಎಂಬ ಕೊಲೆಯೂ ಆಯಿತು ಎಂದ ಅವರು, ಹರ್ಷನ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ತನಿಖೆಗೆ ಒಳಪಡಿಸುವ ಮೂಲಕ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಹಿಜಾಬ್‌ ಹಾಗೂ ಕೇಸರಿ ಶಾಲು ಪ್ರಕರಣ ಮುನ್ನಲೆಗೆ ಬಂದ ನಂತರ ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಮಚ್ಚುಗಳನ್ನು ಬೀಸಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.