ಮುಂಬೈ: 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಇಬ್ಬರು ವ್ಯಕ್ತಿಗಳು ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಗೆಲುವು ಕಠಿಣ ಎನಿಸಿರುವ 60-65 ಕ್ಷೇತ್ರಗಳನ್ನು ‘ಇವಿಎಂಗಳ ಮೂಲಕ’ ಗೆಲ್ಲಿಸಿಕೊಡುವ ಭರವಸೆ ನೀಡಿದ್ದರು ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.
ಈ ಮೂಲಕ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ನೀಡಿದ್ದ ಹೇಳಿಕೆಗೆ ದನಿಗೂಡಿಸಿದ್ದಾರೆ. ‘2024ರ ಚುನಾವಣೆಗೂ ಮುನ್ನ ನನ್ನನ್ನು ಭೇಟಿಯಾಗಿದ್ದ ಇಬ್ಬರು, 288 ವಿಧಾನಸಭಾ ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಲ್ಲಿ ‘ಮಹಾ ವಿಕಾಸ್ ಅಘಾಡಿ’ ಅಭ್ಯರ್ಥಿಗಳನ್ನು ಗೆಲ್ಲಿಸುವ ಖಾತರಿ ನೀಡಿದ್ದರು’ ಎಂದು ಶರದ್ ಪವಾರ್ ಶನಿವಾರ ಹೇಳಿದ್ದರು.
ಲೋಕಸಭೆ ಚುನಾವಣೆ ಸಮಯದಲ್ಲಿಯೂ ಅದೇ ವ್ಯಕ್ತಿಗಳು ಉದ್ಧವ್ ಅವರನ್ನು ಭೇಟಿ ಮಾಡಿದ್ದರು ಎಂದು ರಾವುತ್ ಹೇಳಿದ್ದಾರೆ. ಆದರೆ, ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ನಂಬಿಕೆಯನ್ನು ಪ್ರತಿಪಾದಿಸುವ ಮೂಲಕ ಉದ್ಧವ್, ಆ ಇಬ್ಬರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲಿಲ್ಲ ಎಂದಿದ್ದಾರೆ.
‘ಚುನಾವಣೆಗೆ ಮುನ್ನ ಕೆಲವರು ತಮ್ಮನ್ನು ಭೇಟಿಯಾಗಿದ್ದರು ಎಂದು ಶರದ್ ಪವಾರ್ ಹೇಳಿದ್ದಾರೆ. ಲೋಕಸಭೆ ಚುನಾವಣೆ ಸಮಯದಲ್ಲಿಯೂ ಅದೇ ವ್ಯಕ್ತಿಗಳು ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು. ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದು, ದೇಶದಲ್ಲಿನ ಪರಿಸ್ಥಿತಿ ನೋಡಿದರೆ ಲೋಕಸಭೆ ಚುನಾವಣೆಯಲ್ಲಿ ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಅವರಿಗೆ ತಿಳಿಸಿದೆವು’ ಎಂದು ರಾವುತ್ ಸುದ್ದಿಗಾರರಲ್ಲಿ ಹೇಳಿದರು.
ಕೆಲವು ತಿಂಗಳ ನಂತರ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಅದೇ ವ್ಯಕ್ತಿಗಳು ಉದ್ಧವ್ ಅವರನ್ನು ಸಂಪರ್ಕಿಸಿದ್ದರು ಎಂದು ಅವರು ಹೇಳಿದ್ದಾರೆ.
‘ಗೆಲುವು ಕಠಿಣ ಎನ್ನಬಹುದಾದ 60ರಿಂದ 65 ಸ್ಥಾನಗಳ ಪಟ್ಟಿ ನೀಡುವಂತೆ ತಿಳಿಸಿದರು. ಇವಿಎಂಗಳ ನೆರವಿನಿಂದ ಆ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಭರವಸೆ ನೀಡಿದರು. ನಮಗೆ ಅದರ ಅಗತ್ಯವಿಲ್ಲ ಎಂದು ಉದ್ಧವ್ ಹೇಳಿದರು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.