ADVERTISEMENT

ಹೋಟೆಲ್‌ನಲ್ಲಿ ಪತ್ತೆಯಾದ ಮತಯಂತ್ರ

​ಪ್ರಜಾವಾಣಿ ವಾರ್ತೆ
Published 7 ಮೇ 2019, 18:47 IST
Last Updated 7 ಮೇ 2019, 18:47 IST
   

ಪಟ್ನಾ: ಮುಜಪ್ಫರ್‌ಪುರದ ಹೋಟೆಲ್‌ ಒಂದರಿಂದ ಮಂಗಳವಾರ ಆರು ಮತಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಒಬ್ಬ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಐದನೇ ಹಂತದ ಮತದಾನಕ್ಕಾಗಿ ತಂದಿದ್ದ ಈ ಮತಯಂತ್ರಗಳನ್ನು ಎಲ್ಲಿಯೂ ಬಳಸಿರಲಿಲ್ಲ. ಅವುಗಳ ಮೊಹರನ್ನೂ ಒಡೆದಿರಲಿಲ್ಲ ಎಂದು ತಿಳಿಸಿರುವ ಮುಜಪ್ಫರ್‌ಪುರ ಜಿಲ್ಲಾಧಿಕಾರಿ ಅಲೋಕ್‌ರಂಜನ್‌ ಘೋಷ್‌ ಅವರು ‘ಮತಯಂತ್ರಗಳು ದುರ್ಬಳಕೆಯಾಗಿವೆ’ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

ಐದನೇ ಹಂತದ ಮತದಾನ ನಡೆಯುತ್ತಿದ್ದ ವೇಳೆಯಲ್ಲಿ ತಾಲ್ಲೂಕು ಅಧಿಕಾರಿಯು ಮತಯಂತ್ರಗಳನ್ನು ಹೋಟೆಲ್‌ಗೆ ಒಯ್ದಿದ್ದರು. ‘ಮಹಾಘಟಬಂಧನದ’ ಕೆಲವು ನಾಯಕರಿಗೆ ಈ ಸುದ್ದಿ ತಿಳಿದು ಕೂಡಲೇ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಕೆಲವರು ಸ್ಥಳದಲ್ಲೇ ಪ್ರತಿಭಟನೆಯನ್ನೂ ನಡೆಸಿದರು.

ADVERTISEMENT

‘ಯಾವುದಾದರೂ ಮತಯಂತ್ರ ಕೆಟ್ಟುಹೋದರೆ ಪರ್ಯಾಯ ವ್ಯವಸ್ಥೆ ಮಾಡಲು ಅನುಕೂಲವಾಗಲಿ ಎಂದು ತಾಲ್ಲೂಕು ಚುನಾವಣಾಧಿಕಾರಿಗೆ ಹೆಚ್ಚುವರಿಯಾಗಿ ಮತಯಂತ್ರಗಳನ್ನು ಕೊಡಲಾಗಿತ್ತು. ಅವುಗಳನ್ನು ಅವರು ತಮ್ಮ ಕಾರಿನಲ್ಲಿ ಇಟ್ಟಿದ್ದರು’ ಎಂದು ಘೋಷ್‌ ತಿಳಿಸಿದ್ದಾರೆ.

ಚುನಾವಣಾಧಿಕಾರಿಯನ್ನು ಕರೆದೊಯ್ಯುತ್ತಿದ್ದ ಕಾರಿನ ಚಾಲಕನು ನಗರದ ಹೊರವಯಲಯಕ್ಕೆ ಬಂದಾಗ, ತಾನಿನ್ನೂ ಮತ ಚಲಾಯಿಸಿಲ್ಲ, ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಕೊಡುವಂತೆ ಮನವಿ ಮಾಡಿಕೊಂಡಿದ್ದ. ಅದಕ್ಕೆ ಅನುಮತಿ ನೀಡಿದ ಅಧಿಕಾರಿಯು ಆತ ಮತದಾನಮಾಡಿ ಬರುವವರೆಗೂ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಹೋಟೆಲ್‌ನಲ್ಲಿ ಇರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

‘ಮತಯಂತ್ರಗಳನ್ನು ಹೋಟೆಲ್‌ನಲ್ಲಿ ಇರಿಸುವುದು ಕಾನೂನಿಗೆ ವಿರುದ್ಧವಾದುದು. ಈ ಪ್ರಕರಣದಲ್ಲಿ ತಾಲ್ಲೂಕು ಚುನಾವಣಾಧಿಕಾರಿಯೇ ಭಾಗಿಯಾಗಿರುವುದರಿಂದ 24 ಗಂಟೆಗಳೊಳಗೆ ಸ್ಪಷ್ಟನೆ ನೀಡುವಂತೆ ಅವರಿಗೆ ನೋಟಿಸ್‌ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಹಾರದ ಜಂಟಿ ಮುಖ್ಯ ಚುನಾವಣಾಧಿಕಾರಿ ಪ್ರವೀಣ್‌ ಕುಮಾರ್‌ ಗುಪ್ತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.