ADVERTISEMENT

ಯಮುನಾ ನದಿಯಲ್ಲಿ ಮನಮೋಹನ ಸಿಂಗ್‌ ಅಸ್ಥಿ ವಿಸರ್ಜನೆ

ಮಾಜಿ ಪ್ರಧಾನಿ ಕುಟುಂಬಸ್ಥರಿಂದ ವಿಧಿವಿಧಾನ * ಜ.1ರಂದು ‘ಅಖಂಡ ಪಥ್‌‘

ಪಿಟಿಐ
Published 29 ಡಿಸೆಂಬರ್ 2024, 11:27 IST
Last Updated 29 ಡಿಸೆಂಬರ್ 2024, 11:27 IST
<div class="paragraphs"><p>ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಸ್ಥಿಯನ್ನು ಯುಮುನಾ ನದಿಯಲ್ಲಿ ಭಾನುವಾರ ವಿಸರ್ಜಿಸಲಾಯಿತು</p></div>

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಸ್ಥಿಯನ್ನು ಯುಮುನಾ ನದಿಯಲ್ಲಿ ಭಾನುವಾರ ವಿಸರ್ಜಿಸಲಾಯಿತು

   

– ಪಿಟಿಐ ಚಿತ್ರ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಅಸ್ಥಿಯನ್ನು ‘ಮಜ್‌ನೂ ಕಾ ತಿಲಾ’ ಗುರುದ್ವಾರದ ಬಳಿಯ ಯುಮುನಾ ನದಿಯಲ್ಲಿ ಭಾನುವಾರ ವಿಸರ್ಜನೆ ಮಾಡಲಾಯಿತು. 

ADVERTISEMENT

ಸಿಂಗ್‌ ಅವರ ಅಂತ್ಯಕ್ರಿಯೆ ನಡೆದಿದ್ದ ನಿಗಮ್‌ ಬೋಧ್ ಘಾಟ್‌ನಿಂದ ಭಾನುವಾರ ಬೆಳಿಗ್ಗೆ ಅಸ್ಥಿಯನ್ನು ಸಂಗ್ರಹಿಸಿದ ಅವರ ಕುಟುಂಬಸ್ಥರು, ಬಳಿಕ ಅದನ್ನು ಯುಮುನಾ ನದಿ ದಂಡೆಯಲ್ಲಿನ ‘ಅಸ್ಥ್ ಘಾಟ್‌’ಗೆ ತಂದರು. ನಂತರ ಸಿಖ್‌ ಧರ್ಮದ ಪ್ರಕಾರ ವಿಧಿವಿಧಾನ ಗಳನ್ನು ನೆರವೇರಿಸಿ, ಚಿತಾಭಸ್ಮವನ್ನು ವಿಸರ್ಜಿಸಲಾಯಿತು.

ಅಸ್ಥಿ ವಿಸರ್ಜನೆ ವೇಳೆ ಸಿಂಗ್‌ ಅವರ ಪತ್ನಿ ಗುರುಶರಣ್‌ ಕೌರ್‌ ಮತ್ತು ಪುತ್ರಿಯರಾದ ಉಪಿಂದರ್‌ ಸಿಂಗ್‌, ದಮನ್‌ ಸಿಂಗ್‌ ಮತ್ತು ಅಮೃತ್‌ ಸಿಂಗ್‌ ಅವರು ಉಪಸ್ಥಿತರಿದ್ದರು.

ಮೋತಿಲಾಲ್‌ ನೆಹರೂ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಗ್‌ ಕುಟುಂಬಸ್ಥರು, ಸಿಖ್ ವಿಧಿವಿಧಾನಗಳ ಅನ್ವಯ ಜನವರಿ 1ರಂದು ‘ಅಖಂಡ ಪಥ್‌’ ನಡೆಸಲಿದ್ದಾರೆ. ಸಂಸತ್ತಿನ ಬಳಿಯಿರುವ ರಖಬ್‌ ಗಂಜ್‌ ಗುರುದ್ವಾರದ ಬಳಿ ಜನವರಿ 3ರಂದು ‘ಭೋಗ್‌’ ಕಾರ್ಯಕ್ರಮ, ‘ಅಂತಿಮ್ ಅರ್ದಾಸ್‌’ ಮತ್ತು ‘ಕೀರ್ತನ್‌’ ನಡೆಯಲಿವೆ.

92 ವರ್ಷದ ಸಿಂಗ್‌ ಅವರು ಆನಾರೋಗ್ಯದಿಂದಾಗಿ ಡಿ.26ರಂದು ನಿಧನ ಹೊಂದಿದ್ದರು. ದೆಹಲಿಯ ನಿಗಮ್‌ ಬೋಧ್ ಘಾಟ್‌ನಲ್ಲಿ ಶನಿವಾರ ಅವರ ಅಂತ್ಯಕ್ರಿಯೆ ನಡೆಯಿತು.

ಗಾಂಧಿ ಕುಟುಂಬ ಗೈರು: ಬಿಜೆಪಿ ಟೀಕೆ

‘ಮಾಜಿ ಪ್ರಧಾನಿಯ ಅಸ್ಥಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಗಾಂಧಿ ಕುಟುಂಬದಿಂದ ಯಾರೊಬ್ಬರೂ ಉಪಸ್ಥಿತರಿರಲಿಲ್ಲ’ ಎಂದು ಬಿಜೆಪಿ ನಾಯಕ ಮಂಜೀಂದರ್‌ ಸಿಂಗ್‌ ಸಿರ್ಸಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಂದು ಅಸ್ಥಿ ವಿಸರ್ಜನೆ ವೇಳೆ ಕ್ಯಾಮೆರಾಗಳು ಇರಲಿಲ್ಲ, ಹಾಗಾಗಿ ಕಾಂಗ್ರೆಸ್‌ನಿಂದ ಯಾರೂ ಭಾಗವಹಿಸಿಲ್ಲ. ಇದು ದುಃಖಕರವಾದ ಸಂಗತಿ. ಮನಮೋಹನ ಸಿಂಗ್‌ ಅವರಿಗೆ ಬಹಳ ಗೌರವವಿದೆ’ ಎಂದು ಸಿರ್ಸಾ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.