
ನವದೆಹಲಿ: ‘ಶಿಕ್ಷಣವನ್ನು ಹೊರೆಯಾಗಿ ಭಾವಿಸಬಾರದು; ಕೇವಲ ಅಂಕಗಳ ಮೇಲೆ ಗಮನ ಇಡಬೇಡಿ, ಜೀವನ ಮಟ್ಟವನ್ನು ಸುಧಾರಣೆಗೆ ಆದ್ಯತೆ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಶುಕ್ರವಾರ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ‘ಪ್ರಧಾನಿ ಜೊತೆಗೆ ಪರೀಕ್ಷಾ ಪೇ ಚರ್ಚಾ’ದ 9ನೇ ಸರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಎಲ್ಲರ ಸಲಹೆಗಳನ್ನು ಕೇಳಿ. ನಿಮ್ಮ ಮಾದರಿಯನ್ನು ಅಳವಡಿಸಿಕೊಂಡು ಪರೀಕ್ಷೆಯನ್ನು ಎದುರಿಸಬೇಕು. ಪರೀಕ್ಷೆ ಎಂಬುದು ಹೊರೆಯಲ್ಲ, ಹಬ್ಬದಂತೆ ಸಂಭ್ರಮಿಸಬೇಕು’ ಎಂದು ಅವರು ತಿಳಿಸಿದ್ದಾರೆ.
ಹೆಚ್ಚು ಅಂಕ ಪಡೆಯಲು ಗುರಿ ಇಡುವ ಕುರಿತು ಎಚ್ಚರಿಕೆ ನೀಡಿದ ಪ್ರಧಾನಿ, ಕಳೆದ ವರ್ಷದ ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯ ಹೆಸರು ನೆನಪು ಇದೆಯಾ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.
ಇದಕ್ಕೆ ವಿದ್ಯಾರ್ಥಿಗಳು ‘ಇಲ್ಲ’ ಎಂದು ಉತ್ತರಿಸಿದರು. ಇಂತಹ ಸಾಧನೆಗಳನ್ನು ಕ್ಷಣಕಾಲ ನೆನಪಿಟ್ಟುಕೊಂಡು ಮರೆತುಬಿಡಬಹುದು. ಜೀವನ ಎಂಬುದು ಪರೀಕ್ಷೆಗಷ್ಟೇ ಸೀಮಿತವಲ್ಲ. ಶಿಕ್ಷಣವು ನಮ್ಮ ಅಭಿವೃದ್ಧಿಯ ಒಂದು ಮಾಧ್ಯಮ ಮಾತ್ರ’ ಎಂದು ಮನವರಿಕೆ ಮಾಡಿಕೊಟ್ಟರು.
ನಿಮ್ಮತನ ಇರಲಿ: ‘ವಿದ್ಯಾರ್ಥಿಗಳು ತಮ್ಮದೇ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಎಲ್ಲ ಸಲಹೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ವೈಯಕ್ತಿಕ ಅನುಭವಗಳಿಂದ ನಿಮ್ಮಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ನಾನು ಪರೀಕ್ಷಾ ಪೇ ಚರ್ಚಾ ಆರಂಭಿಸಿದಾಗ, ಒಂದು ಮಾದರಿ ಇತ್ತು. ಕಾಲಕ್ರಮೇಣ, ಅದರಲ್ಲಿ ಸುಧಾರಣೆ ತಂದು, ಬೇೆರೆ ಬೇರೆ ರಾಜ್ಯಗಳಲ್ಲಿಯೂ ಇದನ್ನು ಆರಂಭಿಸಿದ್ದೇನೆ. ಮೂಲವನ್ನು ಉಳಿಸಿಕೊಂಡು ಸ್ವರೂಪವನ್ನು ಬದಲಾಯಿಸಲಾಗಿದೆ’ ಎಂದು ಹೇಳಿದ್ದಾರೆ.
ಬೆಟ್ಟಿಂಗ್ ಗೇಮಿಂಗ್ ಆ್ಯಪ್ ಎಚ್ಚರವಹಿಸಿ
‘ದೇಶದಲ್ಲಿ ಆಟಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಜೂಜಾಟವನ್ನು ನಾವು ಅನುಮತಿಸಬಾರದು. ಇದಕ್ಕಾಗಿ ನಾವು ಕಾನೂನನ್ನು ಮಾಡಿದ್ದೇವೆ. ಆಟವನ್ನು ರಚನಾತ್ಮಕ ಕೌಶಲವಾಗಿ ಪರಿಗಣಿಸಬೇಕು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಇಂದು ಇಂಟರ್‌ನೆಟ್ ಅಗ್ಗದಲ್ಲಿದ್ದು ಸುಲಭವಾಗಿ ಪ್ರವೇಶಿಸಬಹುದು ಎಂದು ಕಾರಣಕ್ಕೆ ಸಮಯ ವ್ಯರ್ಥ ಮಾಡಬೇಡಿ. ಅದನ್ನು ಜನರ ಒಳಿತಿಗಾಗಿ ಬಳಸಿಕೊಳ್ಳಬೇಕು’ ಎಂದು ವಿವರಿಸಿದ್ದಾರೆ. ‘ಕೃತಕ ಬುದ್ಧಿಮತ್ತೆ (ಎ.ಐ) ಎಷ್ಟೇ ಮುಂದುವರಿದರೂ ಕೂಡ ಅದು ಮನುಷ್ಯನ ವಿಮರ್ಶಾತ್ಮಕ ಚಿಂತನೆಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಓದುವುದು ಬರೆಯುವುದು ಆಳವಾಗಿ ಚಿಂತಿಸುವುದನ್ನು ಎ.ಐಗೆ ಬಿಟ್ಟುಕೊಡಬೇಡಿ. ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಿಸಕೊಳ್ಳಬೇಕು’ ಎಂದು ಹೇಳಿದ್ದಾರೆ.
ದಾಖಲೆ ಪ್ರಮಾಣದಲ್ಲಿ ನೋಂದಣಿ
ಟೌನ್‌ಹಾಲ್ ಮಾದರಿಯಲ್ಲಿ 2018ರಲ್ಲಿ ದೇಶದಲ್ಲಿ ಮೊದಲ ಶೈಕ್ಷಣಿಕ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ವರ್ಷ 38.8 ಲಕ್ಷ ನೋಂದಣಿ ಮಾಡಿಕೊಂಡರೆ 2024ರ ವೇಳೆಗೆ 2.26 ಕೋಟಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಕಳೆದ 3.53 ಕೋಟಿ ನೋಂದಣಿ ಮಾಡಿಕೊಳ್ಳುವ ಮೂಲಕ ಗಿನ್ನೆಸ್ ದಾಖಲೆ ಬರೆದಿತ್ತು. 9ನೇ ಆವೃತ್ತಿನಲ್ಲಿ 4.5 ಕೋಟಿ ನೋಂದಣಿಯಾಗಿವೆ. ಸಂಸತ್ ಭವನದಲ್ಲಿರುವ ಬಾಲ್ ಯೋಗಿ ಆಡಿಟೋರಿಯಂನಲ್ಲಿ ಕೂಡ ಪರೀಕ್ಷಾ ಪೇ ಚರ್ಚಾವನ್ನು ಪ್ರಸಾರ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.