ನವದೆಹಲಿ: ‘ಜ್ಞಾನ ಮತ್ತು ಪರೀಕ್ಷೆಗಳು ಎರಡು ವಿಭಿನ್ನ ವಿಷಯಗಳು. ಜೀವನದಲ್ಲಿ ಪರೀಕ್ಷೆಯೇ ಎಲ್ಲ ಅಲ್ಲ; ಅದೇ ಅಂತ್ಯವಲ್ಲ. ಪರೀಕ್ಷೆಯನ್ನು ಒಂದು ಸವಾಲಾಗಿ ಸ್ವೀಕರಿಸಿ. ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಜೀವನವನ್ನು ಉತ್ತಮಪಡಿಸಿಕೊಳ್ಳಿ, ಸಕಾರಾತ್ಮಕ ಚಿಂತನೆಗಳ ಮೂಲಕ ಯಶಸ್ಸು ಗಳಿಸಿ. ತಂತ್ರಜ್ಞಾನವನ್ನು ಜಾಣತನದಿಂದ ಉಪಯೋಗಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು 8ನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಪರೀಕ್ಷೆಯನ್ನು ಎದುರಿಸುವುದು ಮತ್ತು ಒತ್ತಡವನ್ನು ನಿಯಂತ್ರಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸೋಮವಾರ ಸಂವಾದ ನಡೆಸಿದರು.
‘ಪೋಷಕರು ಇತರ ಮಕ್ಕಳನ್ನು ತೋರಿಸಿ, ತಮ್ಮ ಮಕ್ಕಳನ್ನು ಅಲ್ಲಗಳೆಯಬಾರದು. ಮಕ್ಕಳನ್ನು ಬೆಂಬಲಿಸಬೇಕು. ಅವರನ್ನು ಯಾವುದೋ ಒಂದೇ ವಿಷಯಕ್ಕೆ ಸೀಮಿತಗೊಳಿಸದೆ, ಕನಸನ್ನು ನನಸಾಗಿಸಿಕೊಳ್ಳಲು ಅವಕಾಶ ನೀಡಬೇಕು. ಹತ್ತು–ಹನ್ನೆರಡನೇ ತರಗತಿಯಲ್ಲಿ ಮಕ್ಕಳು ಹೆಚ್ಚು ಅಂಕ ತೆಗೆಯದೇ ಇದ್ದರೆ ಬದುಕೇ ನಾಶವಾದಂತೆ ಎಂಬ ಭಾವನೆ ಬಿತ್ತಲಾಗುತ್ತಿದೆ. ಇದು ಸರಿಯಲ್ಲ. ಮಕ್ಕಳು ರೋಬಿಗಳಲ್ಲ’ ಎಂದು ಕಿವಿಮಾತು ಹೇಳಿದರು.
ಬೇರೆ ಬೇರೆ ರಾಜ್ಯಗಳ 35 ವಿದ್ಯಾರ್ಥಿ–ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದ ಪ್ರಧಾನಿ, ಈ ಬಾರಿ ‘ಪರೀಕ್ಷಾ ಪೆ ಚರ್ಚಾ’ಗೆ ಸುಂದರ್ ನರ್ಸರಿಯ ಹೊರ ಆವರಣವನ್ನು ಆಯ್ಕೆ ಮಾಡಿಕೊಂಡಿದ್ದರು. ಮಕ್ಕಳಿಗೆ ಎಳ್ಳಿನುಂಡೆ ನೀಡಿ, ಅದರ ಪೋಷಕಾಂಶದ ಕುರಿತೂ ವಿವರಿಸಿದರು.
ಗಿಡ ನೆಡುವ ಸಂಗತಿಯು ಶಾಲಾದಿನಗಳಲ್ಲಿ ಸಣ್ಣದೇ ಎನಿಸಿದರೂ ಆಮೇಲೆ ಅಭಿವೃದ್ಧಿಗೆ ಅದು ದೊಡ್ಡ ಕೊಡುಗೆಯಾಗಲಿದೆ ಎಂದು ಹೇಳಿದರು.
ಟಿ.ವಿ. ವಾಹಿನಿಗಳಲ್ಲದೆ ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲೂ ಈ ಕಾರ್ಯಕ್ರಮ ಪ್ರಸಾರವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.