ಸಂಭಲ್(ಉತ್ತರ ಪ್ರದೇಶ): ಸಂಭಲ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪುರಾತನ (ಮೃತ್ಯು ಕೂಪ) ಹೆಸರಿನ ಬಾವಿಯ ಉತ್ಖನನವನ್ನು ಜಿಲ್ಲಾಡಳಿತ ಆರಂಭಿಸಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆ ಹೊಂದಿರುವ ಬಾವಿಗಳನ್ನು ಗುರುತಿಸಿ, ಪುನಶ್ಚೇತನಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಈ ಉತ್ಖನನ ನಡೆಯುತ್ತಿದೆ.
ಸ್ಥಳೀಯರ ಪ್ರಕಾರ, ಹಲವು ವರ್ಷಗಳಿಂದ ಈ ಬಾವಿಯನ್ನು ಕಡೆಗಣಿಸಲಾಗಿದ್ದು, ಕಸ ಕಡ್ಡಿ ತುಂಬಿಕೊಂಡಿದೆ.
ಈ ಬಾವಿಯು ಐತಿಹಾಸಿಕ ಹೆಗ್ಗುರುತು ಮಾತ್ರವಲ್ಲದೆ ಪವಿತ್ರ ಸ್ಥಳ ಎಂದು ನಂಬಲಾಗಿದೆ. ಇಲ್ಲಿ ಸ್ನಾನ ಮಾಡುವುದರಿಂದ ಮೋಕ್ಷವನ್ನು ಪಡೆಯಬಹುದು ಎಂದು ಭಕ್ತರು ನಂಬುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಬಾವಿಯು ಈ ಪ್ರದೇಶದ ಆಧ್ಯಾತ್ಮಿಕ ರಚನೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪೌರಾಣಿಕ ಪ್ರಾಮುಖ್ಯತೆಯಿಂದಾಗಿ ಇದನ್ನು ಸ್ಥಳೀಯರು ಹೆಚ್ಚು ನಂಬುತ್ತಾರೆ.
ಅತ್ಯಂತ ಪುರಾತನ ಮತ್ತು ಪೂಜ್ಯ ತಾಣವಾಗಿರುವ ಮೃತ್ಯು ಕೂಪದ ಉತ್ಖನನಕ್ಕೆ ಗುರುವಾರ ಚಾಲನೆ ನೀಡಲಾಗಿದೆ. ನಗರ ಪಾಲಿಕೆಯ ಸಹಕಾರದೊಂದಿಗೆ ಉತ್ಖನನ ನಡೆಸಲಾಗುತ್ತಿದೆ. ಬಾವಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಅದರ ನವೀಕರಣವು ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಹೆಗ್ಗುರುತನ್ನು ಅಭಿವೃದ್ಧಿಪಡಿಸುವಲ್ಲಿ ಜಿಲ್ಲಾಡಳಿತವು ಹೆಚ್ಚು ಸಹಕಾರ ನೀಡಿದೆ" ಎಂದು ಸ್ಥಳೀಯ ಕೌನ್ಸಿಲರ್ ಗಗನ್ ವರ್ಷ್ನಿ ಹೇಳಿದ್ದಾರೆ.
ಸಂಭಲ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ವಂದನಾ ಮಿಶ್ರಾ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ತಂಡದೊಂದಿಗೆ ಹೌಜ್ ಭದ್ದೆ ಸರಾಯಿಯಲ್ಲಿರುವ ಭದ್ರಿಕಾ ಆಶ್ರಮ ತೀರ್ಥ ಮತ್ತು ಚತುರ್ಮುಖ ಕೂಪಕ್ಕೆ ಭೇಟಿ ನೀಡಿದರು.
ಹೆಚ್ಚಿನ ಅಧ್ಯಯನದ ನಂತರ, ತಂಡವು ಬಾವಿಯ ಇತಿಹಾಸವನ್ನು ಪತ್ತೆ ಮಾಡಿ, ಸಂರಕ್ಷಣೆಗಾಗಿ ಶಿಫಾರಸುಗಳನ್ನು ನೀಡುತ್ತದೆ ಎಂದು ಎಸ್‌ಡಿಎಂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.