ADVERTISEMENT

ಕೇಜ್ರಿವಾಲ್‌ ಬಂಧನ: ಮಧ್ಯ ಪ್ರವೇಶಕ್ಕೆ ದೆಹಲಿ ಹೈಕೋರ್ಟ್‌ ನಕಾರ

ಪಿಟಿಐ
Published 27 ಮಾರ್ಚ್ 2024, 15:57 IST
Last Updated 27 ಮಾರ್ಚ್ 2024, 15:57 IST
ಅರವಿಂದ್ ಕೇಜ್ರಿವಾಲ್ 
ಅರವಿಂದ್ ಕೇಜ್ರಿವಾಲ್    

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೆಶನಾಲಯವು ಬಂಧಿಸಿರುವ ವಿಷಯದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ತಮ್ಮನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು, ನಂತರ ಅದರ ವಶಕ್ಕೆ ನೀಡಿರುವ ಕ್ರಮವನ್ನು ಪ್ರಶ್ನಿಸಿ ಅರವಿಂದ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮಾ ನಡೆಸಿದರು.

ಬಂಧನ ಪ್ರಶ್ನಿಸಿ ಹಾಗೂ ಇ.ಡಿ ವಶದಿಂದ ಬಿಡುಗಡೆ ಮಾಡಿ ಮಧ್ಯಂತರ ರಕ್ಷಣೆ ನೀಡುವಂತೆ ಕೋರಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿ ಏಪ್ರಿಲ್‌ 2ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿ ಮಾಡಿದ ನ್ಯಾಯಮೂರ್ತಿ ಶರ್ಮಾ, ವಿಚಾರಣೆಯನ್ನು ಏಪ್ರಿಲ್‌ 3ಕ್ಕೆ ಮುಂದೂಡಿದರು.

ADVERTISEMENT

‘ಏಪ್ರಿಲ್‌ 3ರಂದು ಅರ್ಜಿಯ ಅಂತಿಮ ವಿಚಾರಣೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಮುಂದೂಡಲಾಗುವುದಿಲ್ಲ’ ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಕೇಜ್ರಿವಾಲ್‌ ಸಲ್ಲಿಸಿರುವ ಮೂಲ ಅರ್ಜಿ ಹಾಗೂ ಮಧ್ಯಂತರ ರಕ್ಷಣೆ ಕೋರಿ ಸಲ್ಲಿಸಿರುವ ಅರ್ಜಿಗೆ ಜಾರಿ ನಿರ್ದೇಶನಾಲಯ ಪ್ರತಿಕ್ರಿಯೆಗಳನ್ನು ಏಪ್ರಿಲ್‌ 2ರ ಒಳಗಾಗಿ ಸಲ್ಲಿಸಬೇಕು. ಈ ಪ್ರತಿಕ್ರಿಯೆಗಳ ಮುದ್ರಿತ ಹಾಗೂ ಡಿಜಿಟಲ್‌ ಪ್ರತಿಗಳನ್ನು ಅರ್ಜಿದಾರರ ಪರ ವಕೀಲರಿಗೆ ಒದಗಿಸಬೇಕು’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಕೇಜ್ರಿವಾಲ್ ಅವರನ್ನು ಮಾರ್ಚ್‌ 21ರಂದು ಬಂಧಿಸಲಾಗಿತ್ತು. ದೆಹಲಿಯ ನ್ಯಾಯಾಲಯ ಅವರನ್ನು ಮಾರ್ಚ್‌ 28ರವರೆಗೆ ಇ.ಡಿ ವಶಕ್ಕೆ ನೀಡಿದೆ.

ನಾಳೆ ಕೋರ್ಟ್‌ಗೆ ಹಾಜರು?

ಹಣ ಅಕ್ರಮ ವರ್ಗಾವಣೆ ಆರೋಪದಡಿ ಬಂಧಿಸಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೆಶನಾಲಯವು (ಇ.ಡಿ) ದೆಹಲಿಯ ನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸುವ ಸಾಧ್ಯತೆ ಇದೆ.

ಕೇಜ್ರಿವಾಲ್‌ ಅವರನ್ನು ಮಾರ್ಚ್‌ 28ರಂದು ಮಧ್ಯಾಹ್ನ 2 ಗಂಟೆ ಒಳಗಾಗಿ ತನ್ನ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಕೇಜ್ರಿವಾಲ್‌ ಅವರ ಇ.ಡಿ ಕಸ್ಟಡಿ ಗುರುವಾರ ಅಂತ್ಯಗೊಳ್ಳುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.