ADVERTISEMENT

ಎಫ್‌ಐಆರ್‌ಗೆ ನಿರ್ದೇಶನ: ದಂಡಾಧಿಕಾರಿಗೆ ಅಧಿಕಾರ ಇಲ್ಲ –ಸುಪ್ರೀಂ ಕೋರ್ಟ್ ಆದೇಶ

ಪಿಟಿಐ
Published 19 ಡಿಸೆಂಬರ್ 2018, 19:37 IST
Last Updated 19 ಡಿಸೆಂಬರ್ 2018, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವ ಅಧಿಕಾರ ಕಾರ್ಯನಿರ್ವಾಹಕ ದಂಡಾಧಿಕಾರಿಗಳಿಗೆ (ಜಿಲ್ಲಾಧಿಕಾರಿ, ಉಪವಿಭಾಗೀಯ ಅಧಿಕಾರಿ ಮತ್ತು ತಹಶೀಲ್ದಾರ್‌) ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಕಾರ್ಯನಿರ್ವಾಹಕ ದಂಡಾಧಿಕಾರಿ ಬಳಿ ದಾಖಲಾಗುವ ಖಾಸಗಿ ದೂರುಗಳ ಬಗ್ಗೆ ಸ್ವತಃ ದಂಡಾಧಿಕಾರಿ ಆಡಳಿತಾತ್ಮಕ ತನಿಖೆ ನಡೆಸಿ, ಎಫ್‌ಐಆರ್‌ ದಾಖಲಿಸಿಕೊಳ್ಳಲು ಮಾತ್ರ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ (ಸಿಆರ್‌ಪಿಸಿ) ಅವಕಾಶವಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಕಾನ್ಪುರದ ಛತ್ರಪತಿ ಸಾಹುಜಿ ಮಹಾರಾಜ್‌ ಕಾಲೇಜ್‌ ವಿರುದ್ಧ ಅದೇ ಕಾಲೇಜಿನ ಕಾನೂನು ವಿದ್ಯಾರ್ಥಿನಿಯೊಬ್ಬಳು ಜನವರಿಯಲ್ಲಿ ಉತ್ತರ ಪ್ರದೇಶದ ಉನ್ನಾವ್‌ ಉಪ ವಿಭಾಗೀಯ ದಂಡಾಧಿಕಾರಿ ಬಳಿ ದೂರು ದಾಖಲಿಸಿದ್ದರು.

ಮೂರು ವರ್ಷಗಳ ಕಾನೂನು ಪದವಿ ಕೋರ್ಸ್‌ಗೆ ವಿಶ್ವವಿದ್ಯಾಲಯದ ಮಾನ್ಯತೆ ಇಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಮೋಸ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದರು.

ADVERTISEMENT

ದೂರನ್ನು ಪರಿಶೀಲಿಸಿದ ಉಪ ವಿಭಾಗೀಯ ದಂಡಾಧಿಕಾರಿಯು ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಎಫ್‌ಐಆರ್‌ ರದ್ದು ಮಾಡುವಂತೆ ಕೋರಿ ಕಾಲೇಜು ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.