ನವದೆಹಲಿ: ಕೇಂದ್ರದಲ್ಲಿ ಈಗ ಇರುವ ಸರ್ಕಾರಕ್ಕೆ ಪ್ರತಿಯಾಗಿ 2024ಕ್ಕೆ ಪರ್ಯಾಯ ಸರ್ಕಾರ ಅಸ್ತಿತ್ವಕ್ಕೆ ತರಲು ಪರಿಶ್ರಮ ಹಾಕಲಾಗುತ್ತಿದೆ. ವಿರೋಧ ಪಕ್ಷದ ನಾಯಕರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ.
‘ಹಣದುಬ್ಬರ ಹೆಚ್ಚಾಗಿದೆ, ನಿರುದ್ಯೋಗ ಮಿತಿಮೀರುತ್ತಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಭಾರತೀಯರಿಗೆ ನೀಡಿದ್ದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಪರ್ಯಾಯ ಸರ್ಕಾರ ಅಗತ್ಯವೆನಿಸಿಕೊಂಡಿದೆ’ ಎಂದು ಅವರು ಪ್ರತಿಪಾದಿಸಿದರು.
‘2024ಕ್ಕೆ ಪರ್ಯಾಯ ಸರ್ಕಾರ ರಚಿಸಲು ನಿರಂತರ ಪರಿಶ್ರಮ ಹಾಕಲಾಗುತ್ತಿದೆ. ನಿತೀಶ್, ಮಮತಾ ಮತ್ತು ಕೆಸಿಆರ್ ಅದಕ್ಕಾಗಿ ಶ್ರಮಿಸುತ್ತಿದ್ದಾರೆ’ ಎಂದು ಅಖಿಲೇಶ್ ಹೇಳಿದರು.
ಉತ್ತರ ಪ್ರದೇಶದಿಂದ ಲೋಕಸಭೆಗೆ ಆಯ್ಕೆಯಾಗಿರುವ ಅವರ ಪತ್ನಿ ಡಿಂಪಲ್ ಯಾದವ್ ಸೋಮವಾರ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
‘ಉತ್ತರ ಪ್ರದೇಶದ ಜನರಿಗೆ ದ್ರೋಹವಾಗಿದೆ. ರಾಜ್ಯವು ಸಮೃದ್ಧಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕಿತ್ತು. ಆದರೆ ಅದು ಈಗ ಎಲ್ಲಿದೆ? ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಪ್ರಶ್ನೆ ಮಾಡಿದರು.
‘ಹೂಡಿಕೆದಾರರನ್ನು ಆಹ್ವಾನಿಸಬೇಕು ಎಂದು ನಿಮಗೆ ಅರ್ಥವಾಗಿದ್ದು ಐದು ವರ್ಷಗಳ ನಂತರ. ಕಳೆದ ಐದು ವರ್ಷಗಳಿಂದ ನೀವು ಏನು ಮಾಡಿದ್ದೀರಿ?’ ಎಂದು ಅವರು ಆರೋಪಿಸಿದರು.
ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರಗಳು ಅಸ್ತಿತ್ವದಲ್ಲಿವೆ. 2024ಕ್ಕೆ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.