ಸುಪ್ರೀಂ ಕೋರ್ಟ್, ದ್ರೌಪದಿ ಮುರ್ಮು
ನವದೆಹಲಿ: ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಷ್ಟ್ರಪತಿಯವರು ಕಾಲಮಿತಿಯೊಳಗೆ ಅಂಕಿತ ಹಾಕಬೇಕು ಎಂದು ಏಪ್ರಿಲ್ 8ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಮಹತ್ವದ ಪ್ರಶ್ನೆಗಳನ್ನು ಕೇಳಿದ್ದಾರೆ.
ಸಂವಿಧಾನದ 143(1)ನೇ ವಿಧಿಯಡಿ ದತ್ತವಾದ ಅಧಿಕಾರವನ್ನು ಅಪರೂಪವೆಂಬಂತೆ ಬಳಸಿ, ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
‘ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ, ಕಾನೂನಿಗೆ ಸಂಬಂಧಿಸಿ ಈ ಪ್ರಶ್ನೆಗಳು ಉದ್ಭವಿಸಿವೆ. ಸಾರ್ವಜನಿಕ ಮಹತ್ವದ ಈ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಭಾವಿಸಿದ್ದೇನೆ’ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.
ಸಂವಿಧಾನದ 143(1) ವಿಧಿಯು, ಸುಪ್ರೀಂ ಕೋರ್ಟ್‌ನೊಂದಿಗೆ ಸಮಾಲೋಚನೆ ನಡೆಸುವುದಕ್ಕೆ ರಾಷ್ಟ್ರಪತಿ ಹೊಂದಿರುವ ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ.
‘ಸಾರ್ವಜನಿಕ ಮಹತ್ವದ ಹಾಗೂ ಅಂತಹ ಸ್ವರೂಪದ ಯಾವುದೇ ಕಾನೂನು ಅಥವಾ ವಿಚಾರ ಕುರಿತು ಪ್ರಶ್ನೆಗಳು ಉದ್ಭವಿಸಿದಾಗ ಇಲ್ಲವೇ ಉದ್ಭವಿಸುವ ಸಾಧ್ಯತೆ ಇದ್ದಾಗ, ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ರಾಷ್ಟ್ರಪತಿಗಳು ಭಾವಿಸಿದಾಗ, ಅಂತಹ ಪ್ರಶ್ನೆಯನ್ನು ಅವರು ನ್ಯಾಯಾಲಯಕ್ಕೆ ಕೇಳಬಹುದು. ಈ ಪ್ರಶ್ನೆಗಳ ಕುರಿತು ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಅವರಿಗೆ ತನ್ನ
ಅಭಿಪ್ರಾಯವನ್ನು ತಿಳಿಸಬಹುದು’ ಎಂದು ಈ ವಿಧಿ ಹೇಳುತ್ತದೆ.
ರಾಜ್ಯಪಾಲರು ಅಂಕಿತಕ್ಕಾಗಿ ಕಳುಹಿಸುವ ಮಸೂದೆಗಳನ್ನು ರಾಷ್ಟ್ರಪತಿ ತಡೆ ಹಿಡಿದಿದ್ದರೆ, ರಾಜ್ಯ ಸರ್ಕಾರಗಳು ನೇರವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಬಹುದು ಎಂದು ನ್ಯಾಯಮೂರ್ತಿಗಳಾದ
ಜೆ.ಬಿ.ಪಾರ್ದೀವಾಲಾ ಮತ್ತು ಆರ್.ಮಹಾದೇವನ್ ಅವರು ಇದ್ದ ನ್ಯಾಯಪೀಠವು, ಏಪ್ರಿಲ್ 8ರಂದು ತೀರ್ಪು ನೀಡಿತ್ತು.
ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳಲು ಎಲ್ಲ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಿತ್ತು. ಮಂತ್ರಿ ಪರಿಷತ್ತಿನ ಸಲಹೆಯಂತೆ ರಾಜ್ಯಪಾಲರು ಕ್ರಮ ಕೈಗೊಳ್ಳುವುದು ಕಡ್ಡಾಯ ಎಂದೂ ಪೀಠವು ಹೇಳಿತ್ತು.
ರಾಷ್ಟ್ರಪತಿ ಕೇಳಿದ್ದೇನು?
1. ಮಸೂದೆಯೊಂದನ್ನು ತಮಗೆ ಸಲ್ಲಿಸಿದ ವೇಳೆ, ಸಂವಿಧಾನದ 200ನೇ ವಿಧಿ ಅನ್ವಯ ರಾಜ್ಯಪಾಲರ ಮುಂದಿರುವ ಸಾಂವಿಧಾನಿಕ ಆಯ್ಕೆಗಳು ಯಾವುವು?
2. ತಮಗೆ ಸಲ್ಲಿಕೆಯಾಗಿರುವ ಮಸೂದೆ ಕುರಿತು ನಿರ್ಧಾರ ಕೈಗೊಳ್ಳುವಾಗ, ಸಂವಿಧಾನದ 200ನೇ ವಿಧಿಯಲ್ಲಿ ಅವಕಾಶಗಳ ಅನ್ವಯ ರಾಜ್ಯಪಾಲರು ಅಧಿಕಾರ ಚಲಾಯಿಸಲು ಮಂತ್ರಿ ಪರಿಷತ್ತು ನೀಡುವ ಸಲಹೆಯಂತೆ ನಡೆದುಕೊಳ್ಳಬೇಕೇ?
3. ರಾಜ್ಯಪಾಲರು 200ನೇ ವಿಧಿಯಡಿ ದತ್ತವಾಗಿರುವ ವಿವೇಚನಾಧಿಕಾರ ಚಲಾಯಿಸುವುದರ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ?
4. 200ನೇ ವಿಧಿಯಡಿ ರಾಜ್ಯಪಾಲರು ಕೈಗೊಳ್ಳುವ ಕ್ರಮಗಳ ಕುರಿತು ನ್ಯಾಯಿಕ ಪರಾಮರ್ಶೆ ನಡೆಸುವುದನ್ನು ಸಂವಿಧಾನದ 361ನೇ ವಿಧಿಯು ಸಂಪೂರ್ಣವಾಗಿ ಪ್ರತಿಬಂಧಿಸುತ್ತದೆಯೇ?
5. ರಾಜ್ಯಪಾಲರು ತಮ್ಮ ಅಧಿಕಾರವನ್ನು ಯಾವ ರೀತಿ ಚಲಾಯಿಸಬೇಕು ಮತ್ತು ಅದಕ್ಕಾಗಿ ಕಾಲಮಿತಿ ಕುರಿತು ಸಾಂವಿಧಾನಿಕವಾದ ಆದೇಶ ಇಲ್ಲದ ಸಂದರ್ಭದಲ್ಲಿ, ಅವರಿಗೆ ಕಾಲಮಿತಿ ನಿಗದಿ ಮಾಡಲು ಹಾಗೂ ಹೇಗೆ ಅಧಿಕಾರ ಚಲಾಯಿಸಬೇಕು ಎಂಬುದರ ಕುರಿತು ನ್ಯಾಯಿಕ ಆದೇಶಗಳ ಪ್ರಕಾರ ಸೂಚನೆ ನೀಡಬಹುದೇ?
6. ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿ ಯವರು ತಾವು ಹೊಂದಿರುವ ವಿವೇಚನಾಧಿಕಾರ ಚಲಾಯಿಸುವರು. ಅವರ ಈ ಅಧಿಕಾರ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ?
7. ರಾಷ್ಟ್ರಪತಿಯವರಿಗೆ ಕಾಲಮಿತಿ ಮತ್ತು ಅವರು ಹೇಗೆ ತಮ್ಮ ಅಧಿಕಾರ ಚಲಾಯಿಸಬೇಕು ಎಂಬ ಬಗ್ಗೆ ಸಾಂವಿಧಾನಿಕ ಆದೇಶ ಇಲ್ಲದಿದ್ದಾಗ, ಈ ಕುರಿತು ನ್ಯಾಯಾಲಯಗಳು ಆದೇಶ ಹೊರಡಿಸುವ ಮೂಲಕ ಕಾಲಮಿತಿ ನಿಗದಿ ಮಾಡಬಹುದೇ?
8. ರಾಷ್ಟ್ರಪತಿಯವರು ಹೊಂದಿರುವ ಅಧಿಕಾರ ಕುರಿತು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. 143ನೇ ವಿಧಿಯಡಿ, ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ನ ಸಲಹೆ ಕೇಳಬೇಕೇ? ರಾಷ್ಟ್ರಪತಿ ಅಂಕಿತಕ್ಕಾಗಿ ಮಸೂದೆಯೊಂದನ್ನು ರಾಜ್ಯಪಾಲರು ಕಾಯ್ದಿರಿಸಿದ ಸಂದರ್ಭದಲ್ಲಿ, ರಾಷ್ಟ್ರಪತಿಯು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಕೇಳಬೇಕೇ?
9. ಕಾಯ್ದೆಯೊಂದು ಜಾರಿಯಾಗುವುದಕ್ಕೆ ಮುನ್ನವೇ, ರಾಜ್ಯಪಾಲರು ಹಾಗೂ ರಾಷ್ಟ್ರಪತಿಯು ಕ್ರಮವಾಗಿ 200ನೇ ವಿಧಿ ಮತ್ತು 201ನೇ ವಿಧಿಯಡಿ ಕೈಗೊಂಡಿರುವ ನಿರ್ಧಾರಗಳ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ? ಮಸೂದೆಯೊಂದು ಕಾಯ್ದೆಯಾಗಿ ಜಾರಿಯಾಗುವುದಕ್ಕೂ ಮುನ್ನವೇ ಅದರಲ್ಲಿನ ಅಂಶಗಳ ಕುರಿತು ಕೋರ್ಟ್‌ಗಳು ನ್ಯಾಯನಿರ್ಣಯ ಮಾಡುವುದಕ್ಕೆ ಅನುಮತಿ ಇದೆಯೇ?
10. ರಾಷ್ಟ್ರಪತಿ/ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರ ಚಲಾಯಿಸಿರುವುದನ್ನು ಮತ್ತು ಹೊರಡಿಸಿದ ಆದೇಶಗಳಿಗೆ, ಸಂವಿಧಾನದ 142ನೇ ವಿಧಿಯಡಿ ಪರ್ಯಾಯ ಅಧಿಕಾರ ಚಲಾವಣೆ/ಆದೇಶ ಹೊರಡಿಸುವಂತಹ ಕ್ರಮ ತೆಗೆದುಕೊಳ್ಳಬಹುದೇ?
11. ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು ತಮಗಿರುವ ಅಧಿಕಾರ (200ನೇ ವಿಧಿಯಡಿ) ಬಳಸಿ ಅಂಕಿತ ಹಾಕದೆ ಇದ್ದಾಗಲೂ, ಅದು ಕಾನೂನು ಆಗಿ ಜಾರಿಗೆ ಬರಲು ಅವಕಾಶ ಇದೆಯೇ?
12. ಸಂವಿಧಾನದ 145(3)ನೇ ವಿಧಿ ಪ್ರಕಾರ, ಸುಪ್ರೀಂ ಕೋರ್ಟ್‌ನ ಯಾವುದೇ ನ್ಯಾಯಪೀಠವು ತನ್ನ ಮುಂದಿರುವ ಅರ್ಜಿಯು, ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿ ಮೂಲಭೂತ ಪ್ರಶ್ನೆಗಳನ್ನು ಒಳಗೊಂಡಿದೆ ಎಂಬ ಬಗ್ಗೆ ಮೊದಲು ತೀರ್ಮಾನಿಸುವುದು ಕಡ್ಡಾಯವಲ್ಲವೇ? ನಂತರ ಈ ವಿಚಾರವನ್ನು
ಕನಿಷ್ಠ ಐವರು ಸದಸ್ಯರು ಇರುವ ಪೀಠಕ್ಕೆ ವರ್ಗಾಯಿಸಬೇಕಲ್ಲವೇ?
13. ತನ್ನ ಮುಂದಿರುವ ಪ್ರಕರಣಗಳು/ಅರ್ಜಿಯಲ್ಲಿನ ಅಂಶಗಳು, ಸಂವಿಧಾನ ಅಥವಾ ಸದ್ಯ ಜಾರಿಯಲ್ಲಿರುವ ಕಾನೂನಿಗೆ ವಿರುದ್ಧವಾಗಿ ಇಲ್ಲವೇ ಅಸಮಂಜಸವಾಗಿದ್ದಾಗ ಮಾತ್ರ 142ನೇ ವಿಧಿಯಡಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು/ಆದೇಶ ಹೊರಡಿಸಬೇಕಲ್ಲವೇ?
14. ಸಂವಿಧಾನದ 131ನೇ ವಿಧಿಯಡಿ ದಾಖಲಿಸುವ ದಾವೆ ಹೊರತುಪಡಿಸಿದಂತೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ಹೊಂದಿರುವ ಅಧಿಕಾರ ವ್ಯಾಪ್ತಿಯನ್ನು ಸಂವಿಧಾನ ಪ್ರತಿಬಂಧಿಸುತ್ತದೆಯೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.