
ಸುಪ್ರೀಂ ಕೋರ್ಟ್
ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ವಾರಗಳು ಇರುವ ಹೊತ್ತಿನಲ್ಲಿ ಅತ್ಯಂತ ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂ ಕೋರ್ಟ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸಾರಿದೆ. ಈ ತೀರ್ಪು ಕೇಂದ್ರ ಸರ್ಕಾರಕ್ಕೆ ಆಗಿರುವ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.
ರಾಜಕೀಯ ಪಕ್ಷಗಳಿಗೆ ಗೋಪ್ಯವಾಗಿ ದೇಣಿಗೆ ನೀಡಲು ಅವಕಾಶ ಕಲ್ಪಿಸುವ, 2018ರಲ್ಲಿ ಜಾರಿಗೆ ಬಂದ ಚುನಾವಣಾ ಬಾಂಡ್ ಯೋಜನೆಯು ಸಂವಿಧಾನ ದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಮಾಹಿತಿ ಪಡೆದುಕೊಳ್ಳುವ ಹಕ್ಕಿಗೆ ಧಕ್ಕೆ ತರುವಂಥದ್ದು ಎಂದು ಕೋರ್ಟ್ ಹೇಳಿದೆ.
ಬಾಂಡ್ ಖರೀದಿಸಿದವರ ಹೆಸರು, ಬಾಂಡ್‌ನ ಮೌಲ್ಯ ಮತ್ತು ಬಾಂಡ್ ಪಡೆದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಚುನಾವಣಾ ಬಾಂಡ್ ನೀಡುವ ಪ್ರಕ್ರಿಯೆಯು ತಕ್ಷಣದಿಂದಲೇ ಸ್ಥಗಿತಗೊಳ್ಳಬೇಕು ಎಂದು ಪೀಠವು ತಾಕೀತು ಮಾಡಿದೆ. ಸಂವಿಧಾನ ಪೀಠವು
ಸರ್ವಾನುಮತದಿಂದ ಈ ತೀರ್ಪು ಪ್ರಕಟಿಸಿದೆ.
ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳಲ್ಲಿ ಕಪ್ಪು ಹಣದ ಚಲಾವಣೆಯನ್ನು ಹತ್ತಿಕ್ಕಲು ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಲು ಇದನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ನೀಡಿದ್ದ ವಿವರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಒಪ್ಪಿಲ್ಲ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಈ ಪೀಠದಲ್ಲಿ ಇದ್ದ ಇತರ ನ್ಯಾಯಮೂರ್ತಿಗಳು. ನ್ಯಾಯಪೀಠವು 232 ಪುಟಗಳಲ್ಲಿ ಎರಡು ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದರೂ, ಚುನಾವಣಾ ಬಾಂಡ್ ವಿಚಾರವಾಗಿ ಅವುಗಳಲ್ಲಿ ಭಿನ್ನಮತ ಇಲ್ಲ.
ನ್ಯಾಯಮೂರ್ತಿಗಳಾದ ಗವಾಯಿ, ಪಾರ್ದಿವಾಲಾ ಮತ್ತು ಮಿಶ್ರಾ ಅವರ ಪರವಾಗಿ ಸಿಜೆಐ ಚಂದ್ರಚೂಡ್ ಅವರು ತೀರ್ಪು ಬರೆದಿದ್ದಾರೆ. ನ್ಯಾಯಮೂರ್ತಿ ಖನ್ನಾ ಅವರು ಪ್ರತ್ಯೇಕವಾಗಿ ತೀರ್ಪು ಬರೆದಿದ್ದಾರೆ.
ಚುನಾವಣಾ ಬಾಂಡ್ ಯೋಜನೆಯ ಅಡಿಯಲ್ಲಿ ಆಡಳಿತಾರೂಢ ರಾಜಕೀಯ ಪಕ್ಷಗಳು ಸಾರ್ವಜನಿಕರಿಗೆ ಹಾಗೂ ಸಂಸ್ಥೆಗಳಿಗೆ ದೇಣಿಗೆ ನೀಡುವಂತೆ ಬಲವಂತ ಮಾಡಲು ಅವಕಾಶ ಇದೆ ಎಂದು ಪೀಠ ಹೇಳಿದೆ. ದೇಣಿಗೆ ನೀಡುವವರ ಗೋಪ್ಯತೆಯನ್ನು ಈ ಯೋಜನೆಯು ರಕ್ಷಿಸುತ್ತದೆ, ಇದು ಮತದಾನದಷ್ಟೇ ಗೋಪ್ಯವಾಗಿ ಇರುತ್ತದೆ ಎಂದು ಕೇಂದ್ರವು ಮಂಡಿಸಿದ್ದ ವಾದವನ್ನು ಪೀಠವು ‘ತಪ್ಪು’ ಎಂದು ಹೇಳಿದೆ.
ತೀರ್ಪು ಪ್ರಕಟಿಸಿದ ಸಿಜೆಐ ಚಂದ್ರಚೂಡ್ ಅವರು, ಈ ಯೋಜನೆಯು ಸಂವಿಧಾನದ 19(1)(ಎ) ವಿಧಿಯು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ. ‘ಚುನಾವಣಾ ಬಾಂಡ್ ಯೋಜನೆಯು ದೇಣಿಗೆಗಳನ್ನು ಗೋಪ್ಯವಾಗಿಸುವ ಮೂಲಕ ಮತದಾರರು ಹೊಂದಿರುವ ಮಾಹಿತಿಯ ಹಕ್ಕನ್ನು ಉಲ್ಲಂಘಿಸುವಂತಿದೆ. ಅಷ್ಟರಮಟ್ಟಿಗೆ ಈ ಯೋಜನೆಯು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಉಲ್ಲಂಘಿಸುವಂತಿದೆ’ ಎಂದು ಪೀಠವು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಖಾಸಗಿತನವನ್ನು ಕಾಪಿಟ್ಟುಕೊಳ್ಳುವ ಮೂಲಭೂತ ಹಕ್ಕಿನ ಭಾಗವಾಗಿ, ಪ್ರಜೆಗಳಿಗೆ ರಾಜಕೀಯ ಒಲವುಗಳ ವಿಚಾರದಲ್ಲಿ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕು ಕೂಡ ಇದೆ ಎಂದು ಹೇಳಿದೆ. ಚುನಾವಣಾ ಬಾಂಡ್ ಯೋಜನೆಯ ಜಾರಿಗಾಗಿ ಬೇರೆ ಬೇರೆ ಕಾನೂನುಗಳಿಗೆ ತಂದಿದ್ದ ತಿದ್ದುಪಡಿಗಳನ್ನು ಪೀಠವು ಅಮಾನ್ಯಗೊಳಿಸಿದೆ. ಈ ಯೋಜನೆಯ ಜಾರಿಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಹಾಗೂ ಆದಾಯ ತೆರಿಗೆ ಕಾನೂನುಗಳಿಗೆ ತಿದ್ದುಪಡಿ ತರಲಾಗಿತ್ತು.
ಕಾಂಗ್ರೆಸ್ಸಿನ ನಾಯಕ ಜಯಾ ಠಾಕೂರ್, ಸಿಪಿಎಂ ಪಕ್ಷ, ಸರ್ಕಾರೇತರ ಸಂಘಟನೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ ಚುನಾವಣಾ ಬಾಂಡ್‌ನ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.
ಮತದಾರರು ಮತ ಚಲಾವಣೆಯ ಸ್ವಾತಂತ್ರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದಾದರೆ, ರಾಜಕೀಯ ಪಕ್ಷವೊಂದಕ್ಕೆ ಸಿಗುವ ದೇಣಿಗೆ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯ ಎಂದು ಪೀಠ ಹೇಳಿದೆ.
ನ್ಯಾಯಪೀಠ ನೀಡಿದ ನಿರ್ದೇಶನಗಳು...
*2019ರ ಏಪ್ರಿಲ್ 12ರ ನಂತರ ಖರೀದಿ ಆಗಿರುವ ಚುನಾವಣಾ ಬಾಂಡ್‌ಗಳ ವಿವರವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಅಂದರೆ, ಪ್ರತಿಯೊಂದು ಬಾಂಡ್ ಖರೀದಿಯಾದ ದಿನಾಂಕ, ಅದನ್ನು ಖರೀದಿಸಿದವರ ಹೆಸರು ಹಾಗೂ ಯಾವ ಮೌಲ್ಯದ ಬಾಂಡ್ ಖರೀದಿಸಲಾಯಿತು ಎಂಬುದರ ವಿವರ ಸಲ್ಲಿಸಬೇಕು.
(ಚುನಾವಣಾ ಬಾಂಡ್ ಯೋಜನೆಯ ಅಡಿಯಲ್ಲಿ ಮಾನ್ಯತೆ ಪಡೆದ ಹಣಕಾಸು ಸಂಸ್ಥೆ ಎಸ್‌ಬಿಐ ಮಾತ್ರ. ಅಂದರೆ, ಎಸ್‌ಬಿಐ ಮೂಲಕ ಮಾತ್ರ ಈ ಬಾಂಡ್ ಖರೀದಿಸಲು ಸಾಧ್ಯವಿತ್ತು)
*2019ರ ಏಪ್ರಿಲ್ 12ರ ನಂತರದಲ್ಲಿ ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದ ಪಕ್ಷಗಳ ವಿವರವನ್ನು ಎಸ್‌ಬಿಐ ಸಲ್ಲಿಸಬೇಕು. ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡ ಬಾಂಡ್ ವಿವರವನ್ನು, ಪಕ್ಷಗಳು ಯಾವ ದಿನಾಂಕಕ್ಕೆ ಬಾಂಡ್ ನಗದು ಮಾಡಿಕೊಂಡವು, ಯಾವ ಮೌಲ್ಯದ ಬಾಂಡ್ ನಗದು ಮಾಡಿಕೊಂಡವು ಎಂಬುದನ್ನು ಮಾರ್ಚ್ 6ಕ್ಕೆ ಮೊದಲು ಆಯೋಗಕ್ಕೆ ಸಲ್ಲಿಸಬೇಕು.
*ಚುನಾವಣಾ ಆಯೋಗವು ಎಸ್‌ಬಿಐ ಕಡೆಯಿಂದ ಸಿಗುವ ಈ ವಿವರಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರ್ಚ್ 13ಕ್ಕೆ ಮೊದಲು ಪ್ರಕಟಿಸಬೇಕು.
*ನಗದು ಮಾಡಿಕೊಳ್ಳದ ಬಾಂಡ್‌ಗಳ ಮಾನ್ಯತೆ (ಬಾಂಡ್‌ಗಳಿಗೆ 15 ದಿನಗಳ ಮಾನ್ಯತೆ ಇರುತ್ತದೆ) ಅವಧಿ ಪೂರ್ಣಗೊಳ್ಳದಿದ್ದ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳು ಅಥವಾ ಬಾಂಡ್ ಖರೀದಿಸಿದವರು ಆ ಬಾಂಡ್‌ಗಳನ್ನು ಬ್ಯಾಂಕ್‌ಗೆ ಮರಳಿಸಬೇಕು. ಬ್ಯಾಂಕ್ ಆ ಬಾಂಡ್‌ನ ಮೊತ್ತವನ್ನು ಖರೀದಿಸಿದವರ ಖಾತೆಗೆ ಮರಳಿಸಬೇಕು.
(2019ರ ಏಪ್ರಿಲ್ 12ರಂದು ಮಧ್ಯಂತರ ಆದೇಶವೊಂದನ್ನು ನೀಡಿದ್ದ ಪೀಠವು, ಸ್ವೀಕರಿಸಿರುವ ದೇಣಿಗೆ ಹಾಗೂ ಮುಂದೆ ಸ್ವೀಕರಿಸುವ ದೇಣಿಗೆಯ ಮಾಹಿತಿಯನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಸೂಚಿಸಿತ್ತು.)
ಸಂವಿಧಾನ ಪೀಠದ ಮಾತುಗಳು...
*ಚುನಾವಣೆಯಲ್ಲಿ ಕಪ್ಪು ಹಣದ ಚಲಾವಣೆಯನ್ನು ಹತ್ತಿಕ್ಕಲು ಚುನಾವಣಾ ಬಾಂಡ್ ಮಾತ್ರವೇ ಸಾಧನವಲ್ಲ. ಈ ಉದ್ದೇಶವನ್ನು ಗಮನಾರ್ಹವಾಗಿ ಈಡೇರಿಸುವ ಹಾಗೂ ಮಾಹಿತಿಯ ಹಕ್ಕಿನ ಮೇಲೆ ಬಹಳ ಕಡಿಮೆ ಪರಿಣಾಮ ಉಂಟುಮಾಡುವ ಇತರ ಆಯ್ಕೆಗಳೂ ಇವೆ.
*ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವುದನ್ನು ಸಂವಿಧಾನವು ಬಹಳ ಉನ್ನತವಾದ ಸ್ಥಾನದಲ್ಲಿ ಇರಿಸಿದೆ. ಚುನಾವಣಾ ಪ್ರಕ್ರಿಯೆಗಳು ಋಜು ಮಾರ್ಗದಲ್ಲಿ ಇರುವಂತೆ ನೋಡಿಕೊಳ್ಳುವುದು ಪ್ರಜಾತಂತ್ರ ಮಾದರಿಯ ಸರ್ಕಾರವನ್ನು ಪೋಷಿಸುವಲ್ಲಿ ಮಹತ್ವದ್ದು.
*ರಾಜಕೀಯ ಪಕ್ಷಗಳಿಗೆ ಎರಡು ಕಾರಣಗಳಿಗೆ ದೇಣಿಗೆ ನೀಡಬಹುದು. ಮೊದಲನೆಯದು, ಪಕ್ಷಕ್ಕೆ ಬೆಂಬಲ ಸೂಚಿಸಲು. ಎರಡನೆಯದ್ದು, ದೇಣಿಗೆ ನೀಡಿದ್ದಕ್ಕೆ ಪ್ರತಿಯಾಗಿ ಏನನ್ನೋ ಪಡೆದುಕೊಳ್ಳಲು... ಏನನ್ನೋ ಪಡೆಯುವ ಉದ್ದೇಶದಿಂದ ಮಾಡುವ ದೇಣಿಗೆಯು ರಾಜಕೀಯ ಬೆಂಬಲ ಎಂದು ಪರಿಗಣಿತವಾಗುವುದಿಲ್ಲ.
****
ಚುನಾವಣಾ ಬಾಂಡ್ ರದ್ದು: ಪ್ರತಿಕ್ರಿಯೆಗಳು
ಈ ತೀರ್ಪು ಪ್ರಜಾತಂತ್ರದ ಬಗ್ಗೆ ಪ್ರಜೆಗಳು ಮತ್ತೆ ವಿಶ್ವಾಸ ಇರಿಸುವಂತೆ ಮಾಡುತ್ತದೆ. ಕಳೆದ ಐದು ಅಥವಾ ಏಳು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಇದು. ಇದು ಪ್ರಜಾತಂತ್ರಕ್ಕೆ ಸಿಕ್ಕ ವರ
-ಎಸ್.ವೈ. ಖುರೇಷಿ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ
****
ಚುನಾವಣಾ ದೇಣಿಗೆಗಳಲ್ಲಿನ ಮಾಲಿನ್ಯವನ್ನು ತೊಳೆಯಲು ಕ್ರಮಿಸಬೇಕಿರುವ ಹಾದಿ ಸುದೀರ್ಘ ವಾಗಿದೆ. ಈ ಮೊದಲು ಬಹಳ ವ್ಯಾಪಕವಾಗಿದ್ದ ನಗದು ಬಳಕೆಯ ವ್ಯವಸ್ಥೆ ಮತ್ತೆ ಚಾಲ್ತಿಗೆ ಬರುತ್ತದೆ
-ಎನ್. ಗೋಪಾಲಸ್ವಾಮಿ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ
****
ಈ ತೀರ್ಪಿನ ನಂತರ ಕೇಂದ್ರ ಸರ್ಕಾರ ಇಂತಹ ಕುಚೋದ್ಯದ ಆಲೋಚನೆಗಳನ್ನು ನಿಲ್ಲಿಸುತ್ತದೆ ಎಂದು ಆಶಿಸುತ್ತೇನೆ. ಈ ಯೋಜನೆ ಪಾರದರ್ಶಕವಲ್ಲ ಹಾಗೂ ಪ್ರಜಾತಂತ್ರ ವಿರೋಧಿ ಎಂದು ಆರಂಭದಲ್ಲಿಯೇ ಕಾಂಗ್ರೆಸ್ ಹೇಳಿತ್ತು.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
****
ಈ ತೀರ್ಪು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಿಸುವಂತೆ ಜನರಿಗೆ ಖಾತರಿ ಒದಗಿಸಿದೆ. ಇದು ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನೂ ಖಾತರಿಪಡಿಸುವಂತಿದೆ.
–ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
****
ಚುನಾವಣೆಗೆ ದೇಣಿಗೆ ನೀಡುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶವನ್ನು ಚುನಾವಣಾ ಬಾಂಡ್ ಯೋಜನೆ ಒಳಗೊಂಡಿತ್ತು. ಆದಾಗ್ಯೂ, ಈ ತೀರ್ಪನ್ನು ಬಿಜೆಪಿ ಗೌರವಿಸುತ್ತದೆ.
– ರವಿಶಂಕರ್ ಪ್ರಸಾದ್, ಬಿಜೆಪಿ ಮುಖಂಡ, ಮಾಜಿ ಸಚಿವ
****
ಚುನಾವಣಾ ಬಾಂಡ್ ಯೋಜನೆ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುತ್ತದೆ ಎಂದು ಪಕ್ಷ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಸುಪ್ರೀಂ ಕೋರ್ಟ್‌ನ ಸರ್ವಾನುಮತದ ತೀರ್ಪು ಪಕ್ಷದ ನಿಲುವನ್ನು ಎತ್ತಿ ಹಿಡಿದಂತಾಗಿದೆ.
–ಸೀತಾರಾಮ್ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
****
ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಚುನಾವಣಾ ಬಾಂಡ್‌ಗಳ ಮೂಲಕ ಪಡೆದಿರುವ ದೇಣಿಗೆ ವಿವರಗಳನ್ನು ಆಂಧ್ರಪ್ರದೇಶದ ಆಡಳಿತಾರೂಢ ಪಕ್ಷ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ ಬಹಿರಂಗಪಡಿಸಬೇಕು.
– ದೀಪಕ್ ರೆಡ್ಡಿ, ಟಿಡಿಪಿ ವಕ್ತಾರ
****
ಅನಾಮಧೇಯ ದಾನಿಗಳಿಂದ ಪಕ್ಷಕ್ಕೆ ಹರಿದು ಬರುತ್ತಿದ್ದ ಹಣದ ಪ್ರಯೋಜನ ಪಡೆಯುವುದಕ್ಕಾಗಿ ಬಿಜೆಪಿ, ಚುನಾವಣಾ ಬಾಂಡ್ ವ್ಯವಸ್ಥೆ ಜಾರಿಗೊಳಿಸಿತು. ಈ ವ್ಯವಸ್ಥೆ ಜಾರಿಗೊಂಡಾಗಿನಿಂದ ಲಾಭ ಪಡೆದ ಏಕೈಕ ಪಕ್ಷವೆಂದರೆ ಬಿಜೆಪಿ.
– ಕ್ಲೈಡ್ ಕ್ರಾಸ್ಟೊ, ಎನ್‌ಸಿಪಿ (ಪವಾರ್ ಬಣ) ವಕ್ತಾರ
****
ಚುನಾವಣಾ ಬಾಂಡ್ ಕುರಿತ ತೀರ್ಪು ಸ್ವಾಗತಾರ್ಹ. ಸುಪ್ರೀಂ ಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳುವ ಸಲವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಆತಂಕ ಇದೆ.
– ಸುಪ್ರಿಯೊ ಭಟ್ಟಾಚಾರ್ಯ, ಜೆಎಂಎಂ ವಕ್ತಾರ
****
ಸರ್ಕಾರ ಕೈಗೊಳ್ಳುವ ತೀರ್ಮಾನಗಳಿಗೆ ಜನಾದೇಶ ಕಾರಣವೇ ಅಥವಾ ಸರ್ಕಾರಕ್ಕೆ ಹಣ ನೀಡುವವರು ಕಾರಣವೇ ಎಂಬುದು ಜನರಿಗೆ ತಿಳಿಯುವುದು ಮುಖ್ಯ. ಈ ನಿಟ್ಟಿನಲ್ಲಿ ಈ ತೀರ್ಪು ಮಹತ್ವದ್ದು
– ಆತಿಶಿ, ಎಎಪಿ ನಾಯಕಿ
****
ಕಾನೂನುಬಾಹಿರ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಮಂಡಿಸಿದ್ದ ಚತುರ ವಾದಗಳಿಗಿಂತ ಜನರು ಹೊಂದಿರುವ ಮಾಹಿತಿ ತಿಳಿಯುವ ಹಕ್ಕು ಮೇಲು ಎಂಬುದನ್ನು ಸುಪ್ರೀಂ ಕೋರ್ಟ್‌ನ ಈ ತೀರ್ಪು ಸಾರಿದೆ.
–ಪಿ.ಚಿದಂಬರಂ, ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.