ADVERTISEMENT

ಠಾಣೆ: ವಿಶೇಷ ಸರ್ಕಾರಿ ವಕೀಲ ಘರಾತ್‌ ನೇಮಕ ರದ್ದತಿ ಕೋರಿ ಡಿಐಜಿಗೆ ಪತ್ರ

ಪರಂವೀರ್‌ ಸಿಂಗ್‌ ವಿರುದ್ಧದ ವಸೂಲಿ ಪ್ರಕರಣ

ಪಿಟಿಐ
Published 27 ನವೆಂಬರ್ 2021, 7:13 IST
Last Updated 27 ನವೆಂಬರ್ 2021, 7:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಠಾಣೆ: ಐಪಿಎಸ್‌ ಅಧಿಕಾರಿ ಪರಂವೀರ್‌ ಸಿಂಗ್‌ ವಿರುದ್ಧದ ವಸೂಲಿ ಪ್ರಕರಣಕ್ಕೆ ಸಂಬಂಧಿಸಿ ನೇಮಿಸಿರುವ ಇಬ್ಬರು ವಿಶೇಷ ಸರ್ಕಾರಿ ವಕೀಲರ ಪೈಕಿ ಒಬ್ಬರ ನೇಮಕವನ್ನು ರದ್ದುಪಡಿಸುವಂತೆ ಕೋರಿ ಠಾಣೆ ನಗರದ ಪೊಲೀಸ್‌ ಕಮಿಷನರ್ ಜೈಜೀತ್‌ ಸಿಂಗ್‌ ಅವರು ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದಾರೆ.

ಅಕ್ಟೋಬರ್‌ 11ರಂದು ಜೈಜೀತ್‌ ಸಿಂಗ್‌ ಅವರು ಈ ಪತ್ರ ಬರೆದಿದ್ದಾರೆ. ಆದರೆ, ಪರಂವೀರ್‌ ಸಿಂಗ್‌ ಅವರು ವಿಚಾರಣೆಗಾಗಿ ಇಲ್ಲಿನ ನಗರ ಪೊಲೀಸ್‌ ಠಾಣೆಗೆ ಶುಕ್ರವಾರ ಹಾಜರಾದ ಬೆನ್ನಲ್ಲೇ, ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವಿಶೇಷ ಸರ್ಕಾರಿ ವಕೀಲ ಪ್ರದೀಪ್‌ ಘರಾತ್‌ ಅವರ ನೇಮಕವನ್ನು ರದ್ದುಪಡಿಸಬೇಕು ಎಂದು ಜೈಜೀತ್‌ ಸಿಂಗ್‌ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ADVERTISEMENT

‘ವಕೀಲ ಶೇಖರ್‌ ಜಗತಾಪ್‌ ಅವರನ್ನು ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ವಕೀಲರನ್ನಾಗಿ ಗೃಹ ಇಲಾಖೆ ಆಗಸ್ಟ್‌ 9ರಂದು ನೇಮಕ ಮಾಡಿದೆ. ಆದರೆ, ರಾಜ್ಯ ಕಾನೂನು ಮತ್ತು ನ್ಯಾಯಾಂಗ ಇಲಾಖೆಯು ಪ್ರದೀಪ್‌ ಘರಾತ್‌ ಅವರನ್ನು ವಿಶೇಷ ಸರ್ಕಾರಿ ವಕೀಲರನ್ನಾಗಿ ಸೆ.30ರಂದು ನೇಮಕ ಮಾಡಿದೆ’ ಎಂದುಜೈಜೀತ್‌ ಸಿಂಗ್‌ ಪತ್ರದಲ್ಲಿ ವಿವರಿಸಿದ್ದಾರೆ.

‘ಪರಂವೀರ್‌ ಸಿಂಗ್‌ ವಿರುದ್ಧದ ವಸೂಲಿ ಪ್ರಕರಣದ ತನಿಖೆ ಕೊನೆಯ ಹಂತದಲ್ಲಿದೆ. ದಾಖಲೆಗಳ ಪರಶೀಲನೆಯೂ ನಡೆಯುತ್ತಿದ್ದು, ವಾರದೊಳಗೆ ಎಫ್‌ಐಆರ್‌ಅನ್ನೂ ದಾಖಲಿಸಲಾಗುತ್ತದೆ. ಈ ಹಂತದಲ್ಲಿ ವಿಶೇಷ ಸರ್ಕಾರಿ ವಕೀಲರನ್ನು ಏಕೆ ಬದಲಾಯಿಸಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ಇಬ್ಬರು ವಿಶೇಷ ಸರ್ಕಾರಿ ವಕೀಲರ ನೇಮಕ ಪ್ರಕರಣದ ತನಿಖೆ ಮೇಲೆ ಪರಿಣಾಮ ಬೀರುವುದರಿಂದ, ಪ್ರದೀಪ್‌ ಘರಾತ್‌ ಅವರ ನೇಮಕವನ್ನು ರದ್ದುಪಡಿಸಬೇಕು’ ಎಂದು ಪೊಲೀಸ್‌ ಕಮಿಷನರ್‌ ಅವರು ಈ ಪತ್ರದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.