ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಲಡಾಖ್‌ನ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ವಶಕ್ಕೆ ಪಡೆದಿರುವ ಕುರಿತಂತೆ ಕಾಂಗ್ರೆಸ್‌ನ ಖಂಡನೆಯು ಅತ್ಯಂತ ಬೂಟಾಟಿಕೆಯಿಂದ ಕೂಡಿದೆ ಎಂದು ಬಿಜೆಪಿ ಟೀಕಿಸಿದೆ.
ಲಡಾಖ್‌ಗೆ ಸಂವಿಧಾನದ 6ನೇ ಪರಿಚ್ಛೇದದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ವಾಂಗ್‌ಚುಕ್ ಮತ್ತು ಅವರ ಬೆಂಬಲಿಗರು ದೇಶದ ರಾಜಧಾನಿ ನವದೆಹಲಿಗೆ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದರು. ದೆಹಲಿ ಪ್ರವೇಶಕ್ಕೂ ಮುನ್ನವೇ ಗಡಿಯಲ್ಲಿ ವಾಂಚ್‌ಚುಕ್ ಮತ್ತು ಅವರ 120 ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರನ್ನು ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ.
ವಾಂಗ್‌ಚುಕ್ ಅವರನ್ನು ವಶಕ್ಕೆ ಪಡೆದಿರುವುದು ಸ್ವೀಕಾರಾರ್ಹವಲ್ಲ ಎಂದು ಟೀಕಿಸಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಲಡಾಖ್ ಧ್ವನಿಗೆ ಕಿವಿಗೊಡಬೇಕು ಎಂದಿದ್ದರು.
ಕಾಂಗ್ರೆಸ್ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ನನಗೆ ಈ ಕುರಿತಂತೆ ಹೆಚ್ಚಿನ ಮಾಹಿತಿ ಇಲ್ಲ, ಸತ್ಯಾಸತ್ಯತೆ ತಿಳಿದು ಮಾತನಾಡುತ್ತೇನೆ ಎಂದಿದ್ದಾರೆ.
‘ವಾಂಗ್‌ಚುಕ್ ವಶಕ್ಕೆ ಪಡೆದಿರುವ ಬಗ್ಗೆ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರು, ಕೋಲ್ಕತ್ತ ಮತ್ತು ತಮಿಳುನಾಡಿನಲ್ಲಿ ವ್ಯಂಗ್ಯಚಿತ್ರಕಾರರನ್ನು ಜೈಲಿಗೆ ಹಾಕಿದ್ದಾಗ ಮೌನವಾಗಿದ್ದಿದ್ದೇಕೆ?’ಎಂದು ಪ್ರಶ್ನಿಸಿದ್ದಾರೆ. ವಾಂಗ್‌ಚುಕ್ ಅವರನ್ನು ವಶಕ್ಕೆ ಪಡೆದ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಯು ಅತ್ಯಂತ ಬೂಟಾಟಿಕೆಯಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.
2012ರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ಒಳಗೊಂಡ ವ್ಯಂಗ್ಯಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಜಾಧವಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಅವರ ನೆರೆಯ ವ್ಯಕ್ತಿಯನ್ನು ಜೈಲಿಗೆ ಹಾಕಲಾಗಿತ್ತು.
2017ರಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಪಳನಿಸ್ವಾಮಿಯವರ ಬಗ್ಗೆ ವಿಡಂಬನಾತ್ಮಕ ವ್ಯಂಗ್ಯಚಿತ್ರ ರಚಿಸಿದ್ದಕ್ಕಾಗಿ ಸ್ವತಂತ್ರ ವ್ಯಂಗ್ಯಚಿತ್ರಕಾರರನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.