ADVERTISEMENT

Ahmedabad Flight Crash | ಅಮೆರಿಕದ ಬೋಯಿಂಗ್‌ 787: ಮೊದಲ ಬಾರಿಗೆ ದುರಂತ

ಪಿಟಿಐ
Published 12 ಜೂನ್ 2025, 15:18 IST
Last Updated 12 ಜೂನ್ 2025, 15:18 IST
ಬೋಯಿಂಗ್ 787–8 ವಿಮಾನ
ಬೋಯಿಂಗ್ 787–8 ವಿಮಾನ   

ಅಹಮದಾಬಾದ್‌: ಅಮೆರಿಕದ ಬೋಯಿಂಗ್‌ ಕಂಪನಿಯ ‘787 ಡ್ರೀಮ್‌ಲೈನರ್‌’ ವಿಮಾನವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ. ಈ ವಿಮಾನವು ಪ್ರಯಾಣಕ್ಕೆ ಅತ್ಯಂತ ಸುರಕ್ಷಿತ ಎನ್ನುತ್ತಾರೆ ತಜ್ಞರು. ಆದರೆ, ಇದೇ ಮೊದಲ ಬಾರಿಗೆ ‘787 ಡ್ರೀಮ್‌ಲೈನರ್‌’ ವಿಮಾನವು ಅಪಘಾತಕ್ಕೀಡಾಗಿದೆ. 787 ವಿಮಾನವು 2011ರಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿತ್ತು.

ಅಹಮದಾಬಾದ್‌ನಲ್ಲಿ ಪತನಗೊಂಡಿದ್ದು ‘787–8’ ಎನ್ನುವ ಮಾದರಿಯ ವಿಮಾನ. 2014ರಲ್ಲಿ ಈ ವಿಮಾನವು ಹಾರಾಟ ಆರಂಭಿಸಿತ್ತು. ‘787 ಡ್ರೀಮ್‌ಲೈನರ್‌’ನಲ್ಲಿ ಒಟ್ಟು ಮೂರು ಮಾದರಿಗಳಿವೆ. ಈ ಮೂರರಲ್ಲಿಯೇ ಗುರುವಾರ ಪತನಗೊಂಡ್ಡು ಅತ್ಯಂತ ಸಣ್ಣ ವಿಮಾನದ ಮಾದರಿ ಆಗಿದೆ.

787 ವಿಮಾನದಲ್ಲಿ ಎರಡು ಎಂಜಿನ್‌ಗಳಿರುತ್ತವೆ. ಇವುಗಳನ್ನು ‘ಜಿಇ ಏರೋಸ್ಪೇಸ್‌’ ಅಥವಾ ಬ್ರಿಟನ್‌ನ ‘ರೋಲ್ಸ್‌ ರಾಯ್ಸ್‌’ ಕಂಪನಿ ಪೂರೈಸುತ್ತದೆ. ಅಪಘಾತಕ್ಕೀಡಾದ ವಿಮಾನಕ್ಕೆ ‘ಜಿಇ ಏರೋಸ್ಪೇಸ್‌’ ಕಂಪನಿ ಇಂಜಿನ್‌ ಪೂರೈಸಿತ್ತು.

ADVERTISEMENT

Cut-off box - ಸಂಕಷ್ಟದಲ್ಲಿ ಕಂಪನಿ ಬೋಯಿಂಗ್‌ ಕಂಪನಿಯು 787 ಮಾದರಿಯ ಸುಮಾರು 2500 ವಿಮಾನಗಳನ್ನು ಇದುವರೆಗೆ ಮಾರಾಟ ಮಾಡಿದೆ. ಏರ್‌ ಇಂಡಿಯಾಗೆ 47 ವಿಮಾನಗಳನ್ನು ಪೂರೈಸಿದೆ. 1189 ಜೆಟ್‌ಗಳನ್ನು ಮಾರಾಟ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಂಪನಿಯು ಸಂಕಷ್ಟದಲ್ಲಿ ಇದ್ದು ಪೂರೈಕೆ ತಡವಾಗುತ್ತಿದೆ.

ತಂತ್ರಜ್ಞಾನ ವಿನ್ಯಾಸ ಹೇಗಿದೆ?

* ವಿಮಾನದ ವಿನ್ಯಾಸವು ಅತ್ಯಂತ ಮಹತ್ವದ್ದಾಗಿದೆ. ಇದೇ ಮಾದರಿಯ ಇತರೆ ವಿಮಾನಗಳ ಹೋಲಿಕೆಯಲ್ಲಿ ಈ ವಿಮಾನವು ಶೇ 20ರಷ್ಟು ಇಂಧನವನ್ನು ಕಡಿಮೆ ಬಳಕೆ ಮಾಡುತ್ತದೆ. ಹೆಚ್ಚು ಬಾಳಿಕೆ ಬರುವ ಹಗುರ ತೂಕದ ವಸ್ತುಗಳನ್ನು ಒಳಗೊಂಡ ವಿನ್ಯಾಸ ಇರುವುದರಿಂದ ಇಂಧನ ಉಳಿತಾಯ ಸಾಧ್ಯವಾಗುತ್ತದೆ. ಹಲವು ಕಾರ್ಯಗಳನ್ನು ಸ್ವಯಂ ಚಾಲಿತವಾಗಿಯೇ ಮಾಡುವ ಅತ್ಯಾಧುನಿಕ ತಂತ್ರಜ್ಞಾನ ಈ ವಿಮಾನದಲ್ಲಿದೆ

* ವಿಮಾನದ ವಿನ್ಯಾಸ ಹೆಚ್ಚು ದೂರ ಹಾರಾಟ ನಡೆಸುವ ಸಾಮರ್ಥ್ಯ ವಿಮಾನದ ಒಟ್ಟಾರೆ ಸಾಮರ್ಥ್ಯದ ಕಾರಣಕ್ಕೆ ಈ ವಿಮಾನವು ಹೆಚ್ಚು ಮಾರಾಟವಾಗುತ್ತವೆ. ವಿಮಾನವು ಕಡಿಮೆ ಇಂಧನ ಬಳಸುವುದರಿಂದ ಬೋಯಿಂಗ್‌ 747 ಮತ್ತು ಏರ್‌ಬಸ್‌ ಎ380 ವಿಮಾನಗಳಿಗಿಂತ 787 ಮಾದರಿ ವಿಮಾನಕ್ಕೆ ಹೆಚ್ಚು ಬೇಡಿಕೆ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.