ADVERTISEMENT

‘ಶಿವಾಜಿ ಪ್ರತಿಮೆ ತೆರವು: ಫಡಣವೀಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿ’ ‌

ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದ ಘಟನೆ

ಪಿಟಿಐ
Published 9 ಆಗಸ್ಟ್ 2020, 13:58 IST
Last Updated 9 ಆಗಸ್ಟ್ 2020, 13:58 IST
ಸಂಜಯ್‌ ರಾವತ್‌
ಸಂಜಯ್‌ ರಾವತ್‌   

ಮುಂಬೈ: ಕರ್ನಾಟಕ–ಮಹಾರಾಷ್ಟ್ರ ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿರುವ ಶಿವಸೇನಾ ಸಂಸದ ಸಂಜಯ್‌ ರಾವತ್‌, ಎಲ್ಲ ಪಕ್ಷಗಳೂ ಜೊತೆಯಾಗಿ, ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರ ನೇತೃತ್ವದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ತಿಳಿಸಿದರು.

‘ಈ ವಿಷಯದಲ್ಲಿ ಫಡಣವೀಸ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಂದೇ ನಾಯಕತ್ವದಲ್ಲಿ ಎಲ್ಲರೂ ಜೊತೆಯಾಗಿ ಬೆಳಗಾವಿ ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಬೇಕು’ ಎಂದು ಹೇಳಿದರು.

ಅದೇ ಸ್ಥಳದಲ್ಲಿ ಶಿವಾಜಿ ಪ್ರತಿಮೆಯನ್ನು ಪುನರ್‌ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಇರುವ ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಾಡಿಯ(ಎಂವಿಎ) ಪರವಾಗಿ ಸಚಿವ ಏಕನಾಥ ಶಿಂಧೆ ಶನಿವಾರವಷ್ಟೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

ADVERTISEMENT

ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಸಮನ್ವಯ ಉಸ್ತುವಾರಿ ವಹಿಸಿರುವ ಶಿಂಧೆ, ‘ಗ್ರಾಮ ಪಂಚಾಯಿತಿ ಒಪ್ಪಿಗೆ ಪಡೆದು ಮಂಗುಟ್ಟಿ ಹಳ್ಳಿಯಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿತ್ತು. ಆದರೆ ಆಡಳಿತವು ಉದ್ದೇಶಪೂರ್ವಕವಾಗಿ ಪ್ರತಿಮೆ ತೆರವುಗೊಳಿಸಿದೆ’ ಎಂದು ಪತ್ರದಲ್ಲಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಗಡಿ ಜಿಲ್ಲೆಯಾದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಈ ಆರೋಪವನ್ನು ತಳ್ಳಿ ಹಾಕಿರುವ ಸ್ಥಳೀಯ ಬಿಜೆಪಿ ನಾಯಕ ಆಶಿಶ್‌ ಶೆಲಾರ್‌, ಪ್ರತಿಮೆ ತೆರವುಗೊಳಿಸಲು ಸ್ಥಳೀಯ ಕಾಂಗ್ರೆಸ್‌ ಶಾಸಕರೇ ಆದೇಶಿಸಿದ್ದರು ಎಂದಿದ್ದಾರೆ. ‘ಪ್ರತಿಮೆ ತೆರವುಗೊಳಿಸಿರುವುದನ್ನು ನಾವು ಖಂಡಿಸುತ್ತೇವೆ. ಪ್ರತಿಮೆಯನ್ನು ಗೌರವಯುತವಾಗಿ ಮತ್ತೆ ಸ್ಥಾಪಿಸಬೇಕು. ಆದರೆ, ಪ್ರತಿಮೆ ತೆರವುಗೊಳಿಸಲು ಆದೇಶಿಸಿದ ಕಾಂಗ್ರೆಸ್‌ ಶಾಸಕನ ವಿರುದ್ಧ ಶಿವಸೇನಾ ಪ್ರತಿಭಟನೆ ನಡೆಸಲು ಸಿದ್ಧವಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.