ADVERTISEMENT

ಅಸ್ತಿತ್ವದಲ್ಲೇ ಇಲ್ಲದ ದೇಶಗಳ ಹೆಸರಲ್ಲಿ ರಾಯಭಾರ ಕಚೇರಿ ನಡೆಸುತ್ತಿದ್ದವನ ಬಂಧನ

ಪಿಟಿಐ
Published 23 ಜುಲೈ 2025, 10:00 IST
Last Updated 23 ಜುಲೈ 2025, 10:00 IST
<div class="paragraphs"><p>ಅಸ್ತಿತ್ವದಲ್ಲೇ ಇಲ್ಲದ ದೇಶಗಳ ಹೆಸರಲ್ಲಿ ರಾಯಭಾರ ಕಚೇರಿ ನಡೆಸುತ್ತಿದ್ದ&nbsp;ಹರ್ಷವರ್ಧನ್ ಜೈನ್‌</p></div>

ಅಸ್ತಿತ್ವದಲ್ಲೇ ಇಲ್ಲದ ದೇಶಗಳ ಹೆಸರಲ್ಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್‌

   

ಚಿತ್ರ ಕೃಪೆ: ಎಕ್ಸ್‌

ಲಖನೌ: ಲಖನೌನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದವನನ್ನು ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ADVERTISEMENT

ಅಸ್ತಿತ್ವದಲ್ಲೇ ಇಲ್ಲದ ದೇಶಗಳ ರಾಜತಾಂತ್ರಿಕ ಅಧಿಕಾರಿ ಎಂದು ಹೇಳಿಕೊಂಡು ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್‌ ಎಂಬಾತನನ್ನು ಎಸ್‌ಟಿಎಫ್‌ ಬಂಧಿಸಿದೆ.

ಈತ ಘಾಜಿಯಾಬಾದ್‌ನ ಕವಿ ನಗರದ ನಿವಾಸಿಯಾಗಿದ್ದು, ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಗೆ ವಂಚಿಸಿದ್ದಾನೆ. ಇದಲ್ಲದೆ ನಕಲಿ ಕಂಪನಿಗಳ ಮೂಲಕ ಹವಾಲಾ ದಂಧೆಯಲ್ಲಿಯೂ ಭಾಗಿಯಾದ ಶಂಕೆಯಿದೆ. ಜನರನ್ನು ದಾರಿ ತಪ್ಪಿಸಲು ಪ್ರಧಾನಿ, ರಾಷ್ಟ್ರಪತಿ ಸೇರಿ ಹಲವು ಗಣ್ಯರೊಂದಿಗೆ ಇರುವ ಮಾರ್ಫ್‌ ಮಾಡಿದ ಫೋಟೊಗಳನ್ನು ಇಟ್ಟುಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಡಿಗೆ ಮನೆಯೊಂದರಲ್ಲಿ ಅಸ್ತಿತ್ವದಲ್ಲೇ ಇಲ್ಲದ ಪಶ್ಚಿಮ ಆರ್ಕ್ಟಿಕಾ‌, ಸಬೋರ್ಗಾ, ಪೊಲಿವಿಯಾ ಮತ್ತು ಲೊಡೊನಿಯಾ ಎಂಬ ದೇಶಗಳ ಹೆಸರಲ್ಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ. ವಾಹನಗಳಿಗೆ ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಅಂಟಿಸಿಕೊಂಡು ಓಡಾಡುತ್ತಿದ್ದ. ತನಿಖೆಯಲ್ಲಿ ಜೈನ್‌, ವಿವಾದಿತ ದೇವಮಾನವ ಚಂದ್ರಸ್ವಾಮಿ ಮತ್ತು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಜತೆಗೂ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಅಲ್ಲದೆ 2011ರಲ್ಲಿ ಜೈನ್‌ ಮೇಲೆ ಅಕ್ರಮವಾಗಿ ಸ್ಯಾಟಲೈಟ್‌ ಫೋನ್‌ ಹೊಂದಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ನಕಲಿ ನಂಬರ್‌ ಪ್ಲೇಟ್‌ ಅಂಟಿಸಿದ್ದ ವಾಹನಗಳು, 12 ಮೈಕ್ರೋನೇಷನ್ಸ್ ಎಂದು ಕರೆಯಲ್ಪಡುವ ನಕಲಿ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು, ವಿದೇಶಾಂಗ ಸಚಿವಾಲಯದ ಸ್ಟ್ಯಾಂಪ್‌ ಇರುವ ನಕಲಿ ದಾಖಲೆಗಳು, ಎರಡು ನಕಲಿ ಪ್ಯಾನ್ ಕಾರ್ಡ್‌ಗಳು, ವಿವಿಧ ದೇಶಗಳು ಮತ್ತು ಕಂಪನಿಗಳ 34 ರಬ್ಬರ್ ಸ್ಟ್ಯಾಂಪ್‌ಗಳು ಮತ್ತು ಎರಡು ನಕಲಿ ಪ್ರೆಸ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದರ ಜತೆಗೆ ₹44.7 ಲಕ್ಷ ನಗದು, ವಿದೇಶಿ ಕರೆನ್ಸಿ, ಹಲವು ಕಂಪನಿಗಳ ದಾಖಲೆಗಳು ಮತ್ತು 18 ನಕಲಿ ನಂಬರ್‌ ಪ್ಲೇಟ್‌ಗಳನ್ನು ಎಸ್‌ಟಿಎಫ್‌ ವಶಪಡಿಸಿಕೊಂಡಿದೆ.

ಕವಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.